ಮತ ಪಡೆಯಲು ಗಾಂಧೀಜಿ ಹೆಸರು ಬೇಕು, ಆದರೆ ಗಾಂಧೀಜಿ ತತ್ವ ಬೇಡವೇ ಎಂದು ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಕಾಂಗ್ರೆಸಿಗರನ್ನು ಪ್ರಶ್ನಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೋ ಹತ್ಯೆಯನ್ನು ಗಾಂಧೀಜಿ ಕೂಡ ವಿರೋಧಿಸಿದ್ದರು. ಅಂತಹ ಗಾಂಧೀಜಿಯನ್ನು ಅನುಸರಿಸುವ ಇವರು ಅವರ ತತ್ವವನ್ನೇಕೆ ಬೆಂಬಲಿಸುತ್ತಿಲ್ಲ. ಸರಕಾರ ಗೋಹತ್ಯೆ ನಿಷೇಧ ವಿಧೇಯಕ ತಂದರೆ ರಾಜಕಾರಣಿಯಂತೆ ವರ್ತಿಸುವ ರಾಜ್ಯಪಾಲರು ಅದನ್ನು ಅನುಮೋದಿಸದೆ ರಾಷ್ಟ್ರಪತಿಗೆ ಕಳುಹಿಸುವ ಮೂಲಕ ಅನ್ಯಾಯ ಮಾಡಿದ್ದಾರೆ ಎಂದರು.
ಕೇಂದ್ರದ ಗೃಹ ಸಚಿವ ಪಿ.ಚಿದಂಬರಂ 'ಕೇಸರಿ ಭಯೋತ್ಪಾದನೆ' ಎಂದಿರುವುದನ್ನು ಖಂಡಿಸಿದ ಅವರು, ಭಯೋತ್ಪಾದನೆ ಆರಂಭವಾದದ್ದೆ ಮುಸ್ಲೀಮರಿಂದ ಅದನ್ನು 'ಹಸಿರು ಭಯೋತ್ಪಾದನೆ' ಎಂದು ಏಕೆ ಕರೆಯಲಿಲ್ಲ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಸರಕಾರಕ್ಕೆ ಇನ್ನೂ ಕಾಲಾವಕಾಶವಿದೆ. ಈಗಲಾದರೂ ಹಿಂದೂ ಪರ ಮತ್ತು ಹಿಂದೂ ಸಂಘಟಕರಿಗೆ ಒಳಿತಾಗುವ ಕೆಲಸ ಮಾಡಬೇಕೆಂದು ಕಿವಿ ಮಾತು ಹೇಳುತ್ತೇನೆ. ಅಕ್ಟೋಬರ್ 22ರಂದು 10 ಸಾವಿರ ಶ್ರೀರಾಮಸೇನಾ ಕಾರ್ಯಕರ್ತರೊಂದಿಗೆ ದತ್ತಪೀಠಕ್ಕೆ ಹೋಗುವುದಾಗಿ ತಿಳಿಸಿದರು.