ಬೆಂಗಳೂರು, ಮಂಗಳವಾರ, 14 ಸೆಪ್ಟೆಂಬರ್ 2010( 17:32 IST )
ಬಹುಕೋಟಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಕರೀಂಲಾಲ್ ತೆಲಗಿ ಮೇಲಿನ ಆರೋಪ ಸಾಬೀತಾಗಿದ್ದು, ತೆಲಗಿಗೆ ಜೈಲಿನಲ್ಲಿ ಸಹಕಾರ ನೀಡಿದ ಆರೋಪಕ್ಕೆ ಒಳಗಾಗಿದ್ದ ಇಬ್ಬರು ಜೈಲು ಅಧಿಕಾರಿಗಳು ಸೇರಿದಂತೆ ಒಟ್ಟು 19 ಮಂದಿಯನ್ನು ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.
ಛಾಪಾ ಕಾಗದ ಹಗರಣದಲ್ಲಿ ಶಾಮೀಲಾಗಿದ್ದ ಒಟ್ಟು 36 ಆರೋಪಿಗಳ ಪೈಕಿ ತೆಲಗಿ ಸೇರಿ 17 ಮಂದಿ ವಿರುದ್ಧ ಆರೋಪ ಸಾಬೀತಾಗಿದ್ದು, ಜೈಲು ಅಧೀಕ್ಷಕ ನಂಜಪ್ಪ, ಉಪ ಅಧೀಕ್ಷಕ ಜಯಸಿಂಹ ಸೇರಿದಂತೆ 19 ಮಂದಿಯನ್ನು ಆರೋಪದಿಂದ ಮುಕ್ತಗೊಳಿಸಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಪಾಟೀಲ್ ಅವರು ತೀರ್ಪು ನೀಡಿದ್ದಾರೆ.
ಈ ಇಬ್ಬರು ಜೈಲು ಅಧಿಕಾರಿಗಳು ತೆಲಗಿಗೆ ಸಹಕಾರ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಆದರೆ ಅದಕ್ಕೆ ಬೇಕಾದ ಸೂಕ್ತ ಪುರಾವೆ ಒದಗಿಸಲು ಪ್ರಾಸಿಕ್ಯೂಷನ್ ವಿಫಲವಾದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳು ಖುಲಾಸೆಗೊಂಡಿರುವುದಾಗಿ ವಕೀಲ ವೆಂಕಟರಾವ್ ತಿಳಿಸಿದ್ದಾರೆ.
ವಿಶೇಷ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಚಂದ್ರಶೇಖರ ಪಾಟೀಲ್ ಅವರು, ತೆಲಗಿ, ಬದ್ರುದೀನ್, ಸದಾಶಿವ, ವಾಹೀದ್, ನಿಜಾಮುದ್ದೀನ್, ಸುಲೇಮಾನ್, ಚಾಕೋ, ಖುದ್ದೂಸ್ ಸೇರಿದಂತೆ 17 ಮಂದಿಯ ಮೇಲೆ ಆರೋಪ ಸಾಬೀತಾಗಿರುವುದಾಗಿ ತೀರ್ಪು ನೀಡಿದರು. ಸದ್ಯ ಆರೋಪ ಸಾಬೀತಾಗಿರುವ ತೆಲಗಿ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.