ರಾಜ್ಯದಲ್ಲಿ ಎರಡೂವರೆ ವರ್ಷಗಳು ಅಧಿಕಾರ ನಡೆಸಿ ಲೂಟಿ ಮಾಡಿದ ಹಣವನ್ನು ಚೀನಾದಲ್ಲಿ ಹೂಡಿಕೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರವಾಸ ಕೈಗೊಂಡಿರುವುದಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ, ಕೈಗಾರಿಕಾ ಸಚಿವ, ಮುಖ್ಯ ಕಾರ್ಯದರ್ಶಿ, ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಸೇರಿದಂತೆ ಹಲವರು ಐದು ದಿನಗಳ ಚೀನಾ ಪ್ರವಾಸಕ್ಕೆ ತೆರಳಿರುವ ಬಗ್ಗೆ ತರಾಟೆಗೆ ತೆಗೆದುಕೊಂಡರು.
ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ವಿದೇಶ ಪ್ರವಾಸ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಆದರೆ, ಈಗಾಗಲೇ ಇರುವ ಉದ್ಯಮಗಳಿಗೆ ವಿದ್ಯುತ್ ನೀಡಲು ರಾಜ್ಯ ಸರಕಾರಕ್ಕೆ ಆಗುತ್ತಿಲ್ಲ. ಎರಡು ತಿಂಗಳ ಹಿಂದೆ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿ ಐದು ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹಳೆಯ ಮತ್ತು ಒಪ್ಪಂದ ಮಾಡಿಕೊಂಡಿರುವ ನೂತನ ಉದ್ಯಮಗಳಿಗೆ ಪೂರೈಕೆ ಮಾಡಲು ವಿದ್ಯುತ್ ಇಲ್ಲದಿರುವಾಗ ಹೊಸದಾಗಿ ಬಂಡವಾಳ ಆಕರ್ಷಣೆಗಾಗಿ ವಿದೇಶ ಪ್ರವಾಸ ಕೈಗೊಂಡಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ್ದಾರೆ.
ವಿದೇಶಿ ಪ್ರವಾಸದ ನೆಪದಲ್ಲಿ ರಾಜ್ಯದಲ್ಲಿ ಲೂಟಿ ಮಾಡಿರುವ ಹಣವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಚೀನಾದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ ಎಂದು ದೂರಿದರು. ರಾಜ್ಯದಲ್ಲಿ ಹಣಕಾಸು ಪರಿಸ್ಥಿತಿ ದಿವಾಳಿಯಾಗಿದೆ. ಕೈಗಾರಿಕೆ, ಕೃಷಿ ಯೋಜನೆಗಳಿಗೆ ಎಷ್ಟು ವಿದ್ಯುತ್ ಬೇಕು ಎಂಬ ಅಂದಾಜು ಪಟ್ಟಿಯೇ ಸರಕಾರದ ಬಳಿ ಇಲ್ಲ ಎಂದು ವ್ಯಂಗ್ಯವಾಡಿದರು.