ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನನ್ನು ಸಾರ್ವಜನಿಕರು ಮತ್ತು ಪೋಷಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಇಲ್ಲಿನ ರಾಘವೇಂದ್ರ ಬಡಾವಣೆಯ ಶಾಲಿನ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ನಡೆದಿದೆ.
ಸಂಸ್ಥೆಯ ಶಿಕ್ಷಕ ಬಸವರಾಜ್ ಸಾರ್ವಜನಿಕರು ಮತ್ತು ಪೋಷಕರಿಂದ ಗೂಸಾ ತಿಂದ ಶಿಕ್ಷಕ. ಕಂಪ್ಯೂಟರ್ ಹೇಳಿಕೊಡುತ್ತೇನೆ, ನೀನು ನಮ್ಮ ಮನೆಗೆ ಬಾ ಎಂದು 7ನೇ ತರಗತಿಯ ವಿದ್ಯಾರ್ಥಿನಿಯನ್ನು ಪುಸಲಾಯಿಸಿದ್ದ. ಶಿಕ್ಷಕರ ಮಾತನ್ನು ನಿಜ ಎಂದು ತಿಳಿದ ವಿದ್ಯಾರ್ಥಿನಿ ಶಿಕ್ಷಕರ ಮನೆಗೆ ಹೋದಾಗ ಕಾಮುಕ ಶಿಕ್ಷಕ ಆ ಸಂದರ್ಭದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ.
ಈ ವಿಷಯವನ್ನು ವಿದ್ಯಾರ್ಥಿನಿ ಪೋಷಕರಿಗೆ ತಿಳಿಸಿದ್ದಳು. ಇದರಿಂದ ಆಕ್ರೋಶಗೊಂಡ ಪೋಷಕರು, ಸಾರ್ವಜನಿಕರೊಂದಿಗೆ ಶಾಲೆಗೆ ತೆರಳಿ ಶಿಕ್ಷಕ ಬಸವರಾಜ್‌ಗೆ 'ಮಂಗಳಾರತಿ' ಮಾಡಿದ್ದರು. ಹಿಗ್ಗಾಮುಗ್ಗಾ ಥಳಿಸಿಕೊಂಡ ಶಿಕ್ಷಕ ಈಗ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಸಂಬಂಧ ನಗರದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.