ಗಾನ ಗಾರುಡಿಗ, ನಡೆದಾಡುವ ದೇವರು ಎಂದೇ ಪರಿಗಣಿಸಲ್ಪಟ್ಟಿರುವ ಪಂಡಿತ ಪುಟ್ಟರಾಜ ಗವಾಯಿ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದ್ದು, ನಗರದ ವೀರೇಶ್ವರ ಆಶ್ರಮದಲ್ಲಿ ತಾತ್ಕಾಲಿಕ ತುರ್ತು ನಿಗಾ ಘಟಕವನ್ನಾಗಿ ಮಾರ್ಪಡಿಸಿ ಕೆಎಲ್ಇ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಮತ್ತೊಂದೆಡೆ ಗವಾಯಿಯವರು ಕೂಡಲೇ ಗುಣಮುಖರಾಗಲಿ ಎಂದು ಹಾರೈಸಿ ವಿವಿಧ ಮಠಗಳ ಸ್ವಾಮೀಜಿಗಳು, ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹೋಮ-ಹವನ ಕೂಡ ನಡೆಸುತ್ತಿದ್ದಾರೆ. ಪುಣ್ಯಾಶ್ರಮದ ಕಲಾಭವನದ ಆವರಣದಲ್ಲಿ ಮುಸ್ಲಿಮರು ನಮಾಜ್ ಮಾಡಿ ಗವಾಯಿ ಆರೋಗ್ಯ ಚೇತರಿಕೆಯಾಗಲಿ ಎಂದು ಪ್ರಾರ್ಥಿಸಿದರು. ಹಮಾಲಿ ಕಾರ್ಮಿಕರು ಉರುಳು ಸೇವೆ ನಡೆಸಿದರು.
ಗವಾಯಿಯವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ರಕ್ತದ ಒತ್ತಡ ಹಾಗೂ ಹೃದಯದ ಬಡಿತ ಸಾಮಾನ್ಯ ಸ್ಥಿತಿಯಲ್ಲಿದೆ ಎಂದು ಮಂಗಳವಾರ ಜಿಲ್ಲಾ ಆರೋಗ್ಯಾಧಿಕಾರಿ ಚನ್ನಶೆಟ್ಟಿ ಮತ್ತು ಜಿಲ್ಲಾ ಸರ್ಜನ್ ಆರ್.ಎನ್.ಪಾಟೀಲ ತಿಳಿಸಿದ್ದಾರೆ.
ಪುಟ್ಟರಾಜ ಗವಾಯಿ ಅವರಿಗೆ ಉಸಿರಾಟದ ತೊಂದರೆ ಇರುವುದರಿಂದಾಗಿ ಆಕ್ಸಿಜನ್ ನೀಡಲಾಗುತ್ತಿದೆ. ಸೋಮವಾರ 15 ಲೀಟರ್ ಆಕ್ಸಿಜನ್ ನೀಡಲಾಗಿತ್ತು. ಆದರೆ ಮಂಗಳವಾರ 2 ಲೀಟರ್ ಮಾತ್ರ ಆಕ್ಸಿಜನ್ ಕೊಡಲಾಗಿದೆ. ಇದರಿಂದಾಗಿ ಗವಾಯಿಯವರ ಆರೋಗ್ಯ ಸ್ಥಿತಿ ಸುಧಾರಣೆಯಾಗುತ್ತಿದೆ ಎಂದು ಪಾಟೀಲ್ ವಿವರಿಸಿದ್ದಾರೆ.
ನಡೆದಾಡುವ ದೇವರ ದರ್ಶನ ಪಡೆಯಲು ವೀರೇಶ್ವರ ಆಶ್ರಮಕ್ಕೆ ಭಕ್ತರ ಸಮೂಹವೇ ಹರಿದು ಬರುತ್ತಿದೆ. ದಾವಣಗೆರೆ, ಕೊಪ್ಪಳ, ಹಾವೇರಿ, ಬಾಗಲಕೋಟೆ, ಧಾರವಾಡ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ಗವಾಯಿ ಅವರ ದರ್ಶನ ಪಡೆದರು.