ಕಡೂರು/ಗುಲ್ಬರ್ಗಾ, ಬುಧವಾರ, 15 ಸೆಪ್ಟೆಂಬರ್ 2010( 15:07 IST )
ಕಡೂರು, ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿನ ಉಪ ಚುನಾವಣೆಯಲ್ಲಿನ ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದ್ದು, ಫಲಿತಾಂಶಕ್ಕಾಗಿ ಕ್ಷಣಗಣನೆ ಆರಂಭವಾಗಿದೆ. ಮತ್ತೊಂದೆಡೆ ಸೋಲು-ಗೆಲುವಿನ ಲೆಕ್ಕಚಾರದಲ್ಲಿ ಮೂರು ಪಕ್ಷಗಳ ಕಾರ್ಯಕರ್ತರು, ಅಭಿಮಾನಿಗಳು ಲಕ್ಷಗಟ್ಟಲೇ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.
ಕಡೂರು ಕ್ಷೇತ್ರದಲ್ಲಿ ತಮ್ಮ ನೆಚ್ಚಿನ ಅಭ್ಯರ್ಥಿಗಳ ಪರ ಬೆಟ್ಟಿಂಗ್ ಕಟ್ಟುವವರ ಭರಾಟೆ ಜೋರಾಗಿ ನಡೆಯುತ್ತಿದೆ. ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಸಾವಿರಾರು ರೂಪಾಯಿ ಲೆಕ್ಕಚಾರದಲ್ಲಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಅಷ್ಟೇ ಅಲ್ಲ ಎತ್ತು, ಟ್ರ್ಯಾಕ್ಟರ್ ಅನ್ನು ಕೂಡ ಪಣಕ್ಕೆ ಇಟ್ಟಿರುವುದು ವಿಶೇಷತೆಯಾಗಿದೆ.
ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ.ದತ್ತ, ಬಿಜೆಪಿಯ ಡಾ.ವೈ.ವಿಶ್ವನಾಥ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಕೆಂಪರಾಜು ಪರವಾಗಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹತ್ತು ರೂಪಾಯಿಂದ ಹಿಡಿದು ಸಾವಿರಾರು ರೂಪಾಯಿಯವರೆಗೆ ಬೆಟ್ಟಿಂಗ್ ಕಟ್ಟಲಾಗಿದೆ ಎಂದು ಮೂಲವೊಂದು ತಿಳಿಸಿದೆ.
ಗುಲ್ಬರ್ಗಾದಲ್ಲೂ ಭರ್ಜರಿ ಬೆಟ್ಟಿಂಗ್: ಫಲಿತಾಂಶ ಹೊರಬೀಳಲು ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಯಾರು ಗೆಲ್ತಾರೇ...ಯಾರು ಸೋಲ್ತಾರೆ ಎಂಬ ಬಗ್ಗೆ ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿಯೂ ಬೆಟ್ಟಿಂಗ್ ದಂಧೆ ಭರ್ಜರಿಯಾಗಿಯೇ ನಡೆದಿದೆ. ಇದರಲ್ಲಿ ಕೆಲವರು ಸಾಲ ಮಾಡಿ ಬೆಟ್ಟಿಂಗ್ ಕಟ್ಟುತ್ತಿರುವ ವಿಷಯ ಗಮಮಕ್ಕೆ ಬಂದಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಪದ್ಮನಯನ ತಿಳಿಸಿದ್ದಾರೆ.
ಗುಲ್ಬರ್ಗಾ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ಹುರಿಯಾಳು ಶಿಶಿಲ್ ನಮೋಶಿ, ಜೆಡಿಎಸ್‌ನ ಅರುಣಾ ಪಾಟೀಲ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಪುತ್ರ ಡಾ.ಅಜಯ ಸಿಂಗ್ ಸೇರಿದಂತೆ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾಗಾಗಿ ತಮ್ಮ ನೆಚ್ಚಿನ ಅಭ್ಯರ್ಥಿಯ ಪರ ಬಹುತೇಕ ಬಡಾವಣೆ, ವ್ಯಾಪಾರಿ ಕೇಂದ್ರಗಳಲ್ಲಿ ಎರಡು ಲಕ್ಷ ರೂಪಾಯಿವರೆಗೂ ಬೆಟ್ಟಿಂಗ್ ಕಟ್ಟಲಾಗಿದೆ ಎನ್ನಲಾಗುತ್ತಿದೆ.
ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ವಿವಿಧ ಪಕ್ಷದ ಕಾರ್ಯಕರ್ತರು, ಜನರು ಬೆಟ್ಟಿಂಗ್ ಕಟ್ಟುತ್ತಿರುವ ಬಗ್ಗೆ ಮಾಹಿತಿಗಳು ಬಂದಿವೆ. ಬೆಟ್ಟಿಂಗ್ ಕಟ್ಟುವುದು ಕಾನೂನು ಬಾಹಿರ ಕೆಲಸವಾಗಿದೆ. ಈ ಬಗ್ಗೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಎಂದು ಗುಲ್ಬರ್ಗಾ ಎಸ್ಪಿ ಪದ್ಮನಯನ ತಿಳಿಸಿದ್ದಾರೆ.