ಗುಲ್ಬರ್ಗ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಹಣ ಹಂಚುವ ಮೂಲಕ ಪ್ರಜಾಪ್ರಭುತ್ವಕ್ಕೆ ಅಪಚಾರವೆಸಗಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಎನ್.ಧರಂಸಿಂಗ್ ದೂರಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವ ಬಿಜೆಪಿ ಕಳೆದ ಎರಡೂವರೆ ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಈ ಚುನಾವಣೆಯಲ್ಲಿ ಸೋಲು ಖಾತ್ರಿ ಎಂಬುದನ್ನು ಮನಗಂಡು ಹಣ, ಹೆಂಡ ಹಂಚುವ ಮೂಲಕ ಇಡೀ ವ್ಯವಸ್ಥೆಯನ್ನು ಹದಗೆಡಿಸಿದೆ ಎಂದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಚುನಾವಣೆ ಎದುರಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಇಡೀ ಸಚಿವ ಸಂಪುಟ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತ್ತು. ಸೋಲಿನ ಭಯದಿಂದ ಏನೆಲ್ಲಾ ಕಸರತ್ತು ಮಾಡಿದೆ ಎಂದು ಟೀಕಿಸಿದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಅಜಯ ಸಿಂಗ್ ಗೆಲ್ಲುವುದರಲ್ಲಿ ಅನುಮಾನವಿಲ್ಲ. ಈ ಕ್ಷೇತ್ರದ ಪ್ರಜ್ಞಾವಂತ ಮತದಾರ ಈಗಾಗಲೇ ಮತದಾನ ಮಾಡುವ ಮೂಲಕ ತನಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಅದೇನಿದ್ದರೂ ಅಧಿಕೃತವಾಗಿ ಘೋಷಣೆಯಾಗಬೇಕು ಎಂದು ಹೇಳಿದರು.
ಕಳೆದ 40 ವರ್ಷಗಳ ತಮ್ಮ ರಾಜಕೀಯ ಜೀವನದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹಣ, ಹೆಂಡ ಹಂಚಿಕೆ ನೋಡಿರಲಿಲ್ಲ. ಈ ಮರು ಚುನಾವಣೆಯಲ್ಲಿ ವಿಶೇಷವಾಗಿ ಬಿಜೆಪಿ ತನ್ನ ಸಿದ್ದಾಂತ ಗಾಳಿಗೆ ತೂರಿದೆ ಎಂದು ದೂರಿದರು.