ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಪಾಕ್ ಕೈವಾಡ ಇಲ್ಲ ಎಂದಿರುವ ನಟ ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಚಲನ ಚಿತ್ರ ಪ್ರದರ್ಶನವನ್ನು ರಾಜ್ಯದಲ್ಲಿ ಬಹಿಷ್ಕರಿಸಲಾಗುವುದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ನಗರದಲ್ಲಿ ಖಾಸಗಿ ಭೇಟಿಗೆ ಆಗಮಿಸಿದ ವೇಳೆ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬೈ ಸರಣಿ ಸ್ಫೋಟದಲ್ಲಿ ಪಾಕಿಸ್ತಾನದ ಕೈವಾಡ ಇಲ್ಲ ಎಂಬುದು ದೇಶದ್ರೋಹ ಹೇಳಿಕೆ. ಆದ್ದರಿಂದ ರಾಜ್ಯದಲ್ಲಿ ಸಲ್ಮಾನ್ ಖಾನ್ ನಟಿಸಿರುವ ಚಿತ್ರಗಳ ಪ್ರದರ್ಶನಕ್ಕೆ ಬಹಿಷ್ಕಾರ ಹಾಕಲಾಗುತ್ತದೆ. ಅಮೀರ್ ಖಾನ್ 'ಲಗಾನ್' ಸಿನಿಮಾದಲ್ಲಿ ಬಳಸಿದ ಬ್ಯಾಟ್ ಹರಾಜಿನಲ್ಲಿ ಬಂದ ಹಣವನ್ನು ಪಾಕಿಸ್ತಾನಕ್ಕೆ ನೀಡಿರುವುದನ್ನು ಶ್ರೀರಾಮ ಸೇನೆ ಖಂಡಿಸುತ್ತಿದ್ದು, ಇದು ಕೂಡ ದೇಶದ್ರೋಹ ಎಂದು ಆರೋಪಿಸಿದರು.
ಕಾಶ್ಮೀರದಲ್ಲೂ ಬ್ಲ್ಯೂ ಸ್ಟಾರ್ ಕಾರ್ಯಾಚರಣೆ ನಡೆಯಬೇಕು ಎಂದು ಒತ್ತಾಯಿಸಿದರಲ್ಲದೇ ಲವ್ ಜಿಹಾದ್ ನಿಯಂತ್ರಣಕ್ಕೆ ಆಂದೋಲನ ಕೈಗೊಂಡಿದ್ದು, ಹಿಂದೂ ಹುಡುಗಿಯರನ್ನು ಪುಸಲಾಯಿಸಿ ಮದುವೆಯಾಗಿ ಮತಾಂತರ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಪುಸ್ತಕ, ಕರಪತ್ರ, ಸಿಡಿ ತಯಾರಿಸಲಾಗಿದೆ. ಸಿಡಿಯಲ್ಲಿ ನೊಂದ ಮಹಿಳೆಯರು ತಾವು ಅನುಭವಿಸಿದ ಯಾತನೆ ಹಂಚಿಕೊಂಡಿದ್ದಾರೆ. ಇದರಿಂದಾಗಿ ಯುವತಿಯರು ಎಚ್ಚೆತ್ತುಕೊಳ್ಳುತ್ತಿದ್ದು, ಸುಧಾರಣೆ ಕಂಡುಬಂದಿದೆ ಎಂದರು.