ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಡೂರು ಬಿಜೆಪಿಗೆ, ಗುಲ್ಬರ್ಗಾ ಜೆಡಿಎಸ್‌ಗೆ; ಕಾಂಗ್ರೆಸ್‌ಗೆ ಮುಖಭಂಗ (Kadur | Gulbarga | BJP | By-election results)
Bookmark and Share Feedback Print
 
ಕಡೂರು/ಗುಲ್ಬರ್ಗಾ: ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್‌ಗೆ ಪ್ರತಿಷ್ಠೆಯ ಕಣವಾಗಿದ್ದ ಕಡೂರು ಹಾಗೂ ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿನ ಮತದಾರನ ಅಂತಿಮ ತೀರ್ಪು ಗುರುವಾರ ಹೊರಬಿದ್ದಿದೆ. ಗುಲ್ಬರ್ಗಾ ದಕ್ಷಿಣದಲ್ಲಿ ಜೆಡಿಎಸ್‌ನ ಅರುಣಾ ಪಾಟೀಲ್ ಜಯಭೇರಿ ಬಾರಿಸಿದ್ದರೆ, ಕಡೂರು ಕ್ಷೇತ್ರದಲ್ಲಿ ಬಿಜೆಪಿ ಹುರಿಯಾಳು ಡಾ.ವೈ.ಸಿ.ವಿಶ್ವನಾಥ ಗೆಲುವಿನ ನಗು ಬೀರಿದ್ದಾರೆ. ಆದರೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲಿನೊಂದಿಗೆ ಮುಖಭಂಗ ಅನುಭವಿಸಿದೆ.

ಗುಲ್ಬರ್ಗಾ ದಕ್ಷಿಣ: ಗುಲ್ಬರ್ಗಾ ದಕ್ಷಿಣ ಕ್ಷೇತ್ರದಲ್ಲಿ ಶತಾಯ-ಗತಾಯ ಗೆಲ್ಲಲೇಬೇಕೆಂಬ ಬಿಜೆಪಿ ಮತ್ತು ಕಾಂಗ್ರೆಸ್ ಹಂಬಲಕ್ಕೆ ಜೆಡಿಎಸ್‌ನ ಅರುಣಾ ರೇವೂರ ಪಾಟೀಲ್ ಅವರು ಕಡಿವಾಣ ಹಾಕಿ, ಅನುಕಂಪದ ಅಲೆಯೊಂದಿಗೆ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಪುತ್ರ ಡಾ.ಅಜಯ್ ಸಿಂಗ್ 35,667 ಮತಗಳಿಸಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಬಿಜೆಪಿಯ ಶಿಶಿಲ್ ನಮೋಶಿ 35,031 ಮತ ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಬಿಜೆಪಿಯ ಹಾಲಿ ಶಾಸಕರಾಗಿದ್ದ ಚಂದ್ರಶೇಖರ್ ಪಾಟೀಲ್ ರೇವೂರ ಅವರ ಸಾವಿನಿಂದ ತೆರವಾಗಿದ್ದ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಆದರೆ ಬಿಜೆಪಿ ರೇವೂರ ಪತ್ನಿ ಅರುಣಾ ಪಾಟೀಲ್‌ಗೆ ಟಿಕೆಟ್ ನಿರಾಕರಿಸಿತ್ತು. ಈ ಅವಕಾಶವನ್ನು ಬಳಸಿಕೊಂಡ ಜೆಡಿಎಸ್ ಅರುಣಾಗೆ ಪಕ್ಷದ ವತಿಯಿಂದ ಟಿಕೆಟ್ ನೀಡಿ ಗೆಲುವಿನ ನಗು ಬೀರಿದೆ. ಏತನ್ಮಧ್ಯೆ ಹಾಲಿ ಸಂಸದ ಧರಂಸಿಂಗ್ ಪುತ್ರ, ಡಾ.ಅಜಯ್ ಸಿಂಗ್ ಪರವಾಗಿ ಕೇಂದ್ರ ಸಚಿವರು ಸೇರಿದಂತೆ ಘಟಾನುಘಟಿಗಳು ಅಬ್ಬರದ ಪ್ರಚಾರ ನಡೆಸಿದರೂ ಕೂಡ ಕಾಂಗ್ರೆಸ್ ಸೋಲಿನ ರುಚಿ ಉಂಡಿದೆ.

ಕಡೂರು ಕ್ಷೇತ್ರ: ಕಡೂರು ಕ್ಷೇತ್ರದಲ್ಲಿ ಮೊತ್ತ ಮೊದಲ ಬಾರಿಗೆ ಕೇಸರಿ ಪಡೆ ಜಯ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ಡಾ.ವೈ.ಸಿ.ವಿಶ್ವನಾಥ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ನ ವೈ.ಎಸ್.ವಿ.ದತ್ತ ಅವರನ್ನು ಸೋಲಿಸಿ, ಸುಮಾರು 14 ಸಾವಿರ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.

2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ವೈ.ಎಸ್.ವಿ.ದತ್ತ ಅವರು ಕಾಂಗ್ರೆಸ್‌ನ ಕೆ.ಎಂ.ಕೃಷ್ಣಮೂರ್ತಿ ವಿರುದ್ಧ ಕೇವಲ 1,500 ಮತಗಳಿಂದ ಪರಾಜಯಗೊಂಡಿದ್ದರು. ಈ ಸಂದರ್ಭದಲ್ಲಿ ಬಿಜೆಪಿಯ ಡಾ.ವೈ.ಸಿ.ವಿಶ್ವನಾಥ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಆದರೆ ಈ ಬಾರಿ ಕಡೂರು ಕ್ಷೇತ್ರದ ಮತದಾರ ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರದ ಗದ್ದುಗೆ ನೀಡಿದ್ದಾರೆ.

ಕಾಂಗ್ರೆಸ್‌ನ ಕೆ.ಎಂ.ಕೃಷ್ಣಮೂರ್ತಿ ಅವರ ಅಕಾಲಿಕ ಮರಣದಿಂದ ಉಪ ಚುನಾವಣೆ ನಡೆದಿತ್ತು. ಈ ಹಿಂದೆ ಕಾಂಗ್ರೆಸ್, ಜೆಡಿಎಸ್ ಹಿಡಿತದಲ್ಲಿದ್ದ ಕಡೂರು ಕ್ಷೇತ್ರ, ಈ ಬಾರಿ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕಾಂಗ್ರೆಸ್ ಪಕ್ಷ ಕೃಷ್ಣಮೂರ್ತಿ ಅವರ ಸಹೋದರ ಕೆ.ಎಂ.ಕೆಂಪರಾಜು ಅವರನ್ನು ಕಣಕ್ಕಿಳಿಸಿದ್ದರೂ ಸಹ ಯಾವುದೇ ಅನುಕಂಪದ ಅಲೆ ನೆರವಿಗೆ ಬಂದಿಲ್ಲ. ಕೆಂಪರಾಜು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟು ಕಾಂಗ್ರೆಸ್ ಹೀನಾಯ ಸೋಲನ್ನುಂಡಿದೆ.

ತೆರವಾಗಿದ್ದ ಈ ಎರಡು ಕ್ಷೇತ್ರಗಳಿಗೆ ಸೋಮವಾರವಷ್ಟೇ ಚುನಾವಣೆಗಳು ನಡೆದಿದ್ದವು. ಮೂರೂ ಪಕ್ಷಗಳು ಭಾರೀ ಪ್ರಚಾರ ಮಾಡುತ್ತಾ, ಇದನ್ನು ಪ್ರತಿಷ್ಠೆಯ ಕಣವೆಂದೇ ಸ್ವೀಕರಿಸಿದ್ದವು.

ಚುನಾವಣಾ ಫಲಿತಾಂಶ ಪಟ್ಟಿ:

ಪಕ್ಷಅಭ್ಯರ್ಥಿಕ್ಷೇತ್ರಪಡೆದ ಮತಗಳುಫಲಿತಾಂಶ
ಬಿಜೆಪಿಡಾ. ವೈ.ಸಿ. ವಿಶ್ವನಾಥ್ಕಡೂರು55,479ಗೆಲುವು
ಜೆಡಿಎಸ್ವೈ.ಎಸ್.ವಿ. ದತ್ತಾಕಡೂರು41,742ಸೋಲು
ಕಾಂಗ್ರೆಸ್ಕೆ.ಎಂ. ಕೆಂಪರಾಜುಕಡೂರು30,138ಸೋಲು
ಜೆಡಿಎಸ್ಅರುಣಾ ಪಾಟೀಲ್ಗುಲ್ಬರ್ಗಾ ದಕ್ಷಿಣ39,430ಗೆಲುವು
ಬಿಜೆಪಿಶಶೀಲ್ ನಮೋಶಿಗುಲ್ಬರ್ಗಾ ದಕ್ಷಿಣ35,898ಸೋಲು
ಕಾಂಗ್ರೆಸ್ಅಜಯ್ ಸಿಂಗ್ಗುಲ್ಬರ್ಗಾ ದಕ್ಷಿಣ35,567ಸೋಲು

ಸಂಬಂಧಿತ ಮಾಹಿತಿ ಹುಡುಕಿ