ಬೆಂಗಳೂರು, ಗುರುವಾರ, 16 ಸೆಪ್ಟೆಂಬರ್ 2010( 11:23 IST )
ಸಾಫ್ಟ್‌ವೇರ್ ಇಂಜಿನಿಯರ್ ಗಿರೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿ ಶ್ರೀಧರ್ ರಾವ್ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಅವರ ವಿಭಾಗೀಯ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.
2003ರ ಡಿಸೆಂಬರ್ 3ರಂದು ಗಿರೀಶ್ ಅವರನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಕಾನೂನು ವಿದ್ಯಾರ್ಥಿನಿ, ಗಿರೀಶ್ ಭಾವಿ ಪತ್ನಿ ಶುಭಾ ಪ್ರಮುಖ ಆರೋಪಿಯಾಗಿದ್ದು, ಈಕೆಯನ್ನು ಒಳಗೊಂಡಂತೆ ಇತರ ಮೂವರಿಗೆ ಬೆಂಗಳೂರಿನ 17ನೆ ತ್ವರಿತ ವಿಲೇವಾರಿ ನ್ಯಾಯಾಲಯ ಜುಲೈ 14ರಂದು ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿತ್ತು.
ಶಿಕ್ಷೆಯನ್ನು ವಜಾಗೊಳಿಸುವಂತೆ ಶುಭಾ ಹಾಗೂ ಇತರ ಆರೋಪಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣವನ್ನು ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಶ್ರೀಧರ್ ರಾವ್ ಮತ್ತು ಬಿ.ವಿ.ಪಿಂಟೋ ವಿಚಾರಣೆ ನಡೆಸುತ್ತಿದ್ದರು.
ಏತನ್ಮಧ್ಯೆ ಕೆಲವು ಅನಾಮಧೇಯ ವ್ಯಕ್ತಿಗಳು ಕರಪತ್ರಗಳನ್ನು ಹಂಚಿ ಶುಭ ಪ್ರಕರಣದ ವಿಚಾರಣೆಗೆ ವಿಶೇಷ ಆಸಕ್ತಿ ವಹಿಸಲಾಗುತ್ತಿದೆ. ಸಾವಿರಾರು ಪ್ರಕರಣಗಳು ಬಾಕಿ ಇದ್ದರೂ ಈ ಪ್ರಕರಣಕ್ಕೆ ಹೆಚ್ಚಿನ ಸಮಯ ನಿಗದಿ ಮಾಡಿರುವುದರ ಗುಟ್ಟೇನು ಎಂಬರ್ಥದಲ್ಲಿ ಅಪಪ್ರಚಾರ ನಡೆಸಿದ್ದರು.
ಕರಪತ್ರಗಳನ್ನು ಹಂಚಿದ ದಿನವೇ ತೀವ್ರ ಮುಜುಗರಕ್ಕೊಳಗಾದ ನ್ಯಾ.ಶ್ರೀಧರ್ ರಾವ್ ಇದು ನನ್ನನ್ನು ಗುರಿಯಾಗಿಟ್ಟುಕೊಂಡೇ ಅಪಪ್ರಚಾರ ಮಾಡಲಾಗಿದೆ ಎಂದು ನೊಂದು ನುಡಿದಿದ್ದಾರೆ. ನಾನು ಈವರೆಗೆ 27,500 ಪ್ರಕರಣಗಳ ವಿಚಾರಣೆ ನಡೆಸಿರುವೆ. ಎಂದೂ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿರಲಿಲ್ಲ. ಅಲ್ಲದೇ ಎಂದೂ ಇಂತಹ ಆರೋಪಗಳು ನನ್ನ ಮೇಲೆ ಬಂದಿರಲಿಲ್ಲವಾಗಿತ್ತು. ಆದರೆ ಇದೀಗ ನನ್ನ ವೈಯಕ್ತಿಕ ಕಾರಣಗಳಿಂದ ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಬುಧವಾರ ತಿಳಿಸಿದ್ದರು.
ನಾನು ಹೇಡಿಯಲ್ಲ, ಹೇಡಿಯಾಗಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿಲ್ಲ, ವೈಯಕ್ತಿಕ ಕಾರಣದಿಂದ ಹಿಂದೆ ಸರಿದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಇದು ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಆಪತ್ತು ತರುವಂತಹ ಬೆಳವಣಿಗೆ ಎಂದು ನ್ಯಾ.ಶ್ರೀಧರ್ ರಾವ್ ವಿಷಾದ ವ್ಯಕ್ತಪಡಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ನ್ಯಾ.ಜೆ.ಎಸ್.ಕೇಹರ್ ಅವರ ಪೀಠಕ್ಕೆ ವರ್ಗಾಯಿಸುತ್ತಿರುವುದಾಗಿ ತಿಳಿಸಿದರು.