ಡಾ.ಪಂಡಿತ ಪುಟ್ಟರಾಜ ಗವಾಯಿಗಳಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡುವುದೂ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ವೀರೇಶ್ವರ ಪುಣ್ಯಾಶ್ರಮದ ಭಕ್ತರು ಈ ಹಿಂದೆಯೇ ಸರಕಾರದ ಮುಂದಿಟ್ಟಿದ್ದರು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸರಕಾರ ಬದ್ಧವಾಗಿದೆ ಎಂದು ಸಚಿವರಾದ ಬಸವರಾಜ ಬೊಮ್ಮಾಯಿ ಹಾಗೂ ಸಿ.ಎಂ.ಉದಾಸಿ ಜಂಟಿಯಾಗಿ ತಿಳಿಸಿದ್ದಾರೆ.
ನಗರದ ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಪುಟ್ಟರಾಜ ಕವಿ ಗವಾಯಿಗಳ ಆರೋಗ್ಯ ವಿಚಾರಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಟ್ಟರಾಜ ಕವಿ ಗವಾಯಿ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಬೇಕೆಂಬ ಹಲವು ದಿನಗಳ ಬೇಡಿಕೆ ಸರಕಾರದ ಮುಂದಿದೆ. ಭಕ್ತರ ಬೇಡಿಕೆಗೆ ಸರಕಾರ ಸೂಕ್ತವಾಗಿ ಸ್ಪಂದಿಸಲಿದೆ. ಈ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.
ನಾಡಿನ ಭಕ್ತರ ಮನದಲ್ಲಿ ನೆಲೆಸಿರುವ ಪುಟ್ಟರಾಜರು ಅಸಾಮಾನ್ಯ ಸಾಧನೆಗೈದಿದ್ದಾರೆ. ದೃಷ್ಟಿವಿಕಲಚೇತನರ ಬಾಳಿಗೆ ಬೆಳಕಾಗಿ ಖ್ಯಾತಿ ಪಡೆದಿದ್ದಾರೆ. ಇವರು ಕರ್ನಾಟಕದ ಹೆಮ್ಮೆ. ಮೇರು ಸಾಧನೆ ಮಾಡಿರುವ ಶ್ರೀಗಳನ್ನು ಗೌರವಿಸುವುದು ಸರಕಾರದ ಜವಾಬ್ದಾರಿ ಕೂಡ. ಈ ನಿಟ್ಟಿನಲ್ಲಿ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದರು.
ಪುಟ್ಟರಾಜ ಕವಿ ಗವಾಯಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಆತಂಕಕ್ಕೆ ತೆರೆ ಬಿದ್ದಿದೆ. ಸೋಮವಾರಕ್ಕೆ ಹೋಲಿಸಿದರೆ ವಿಸ್ಮಯಕಾರಿ ಬದಲಾವಣೆ ಕಂಡು ಬಂದಿದೆ. ಇದು ಭಕ್ತರ ಪ್ರಾರ್ಥನೆ ಹಾಗೂ ದೇವರ ಕರುಣೆಯ ಫಲವೇ ಸರಿ ಎಂದು ಹೇಳಿದರು.
ಪೂರ್ವ ನಿಗದಿಯಂತೆ ಶ್ರೀಗಳ 97 ನೇ ಜನ್ಮದಿನದ ಅಂಗವಾಗಿ ಅದ್ದೂರಿ ಸುವರ್ಣ ತುಲಾಭಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈಗಾಗಲೇ ಸುವರ್ಣ ತುಲಾಭಾರ ನಡೆಸಲು ಅಗತ್ಯ ಸಿದ್ಧತೆಗಳು ಶುರುವಾಗಿದೆ. ನಾಡು ಕಂಡರಿಯದ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಶ್ರೀಗಳಿಗೆ ಗುರುವಂದನೆ ಸಲ್ಲಿಸಲಾಗುವುದು ಎಂದು ಸಚಿವರು ಹೇಳಿದರು.