ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮೂಡುಬಿದರೆ: ಖದೀಮ ಶಿಕ್ಷಕನ ವಿವಾಹ ಪುರಾಣ! (Moodabidari | Chithra durga | Rajaji nagar | Wedding)
Bookmark and Share Feedback Print
 
ಪ್ರೀತಿಸುತ್ತಿದ್ದ ಹುಡುಗಿಗೆ ಕೈಕೊಟ್ಟು ಮತ್ತೊಬ್ಬಾಕೆ ಜತೆ ಹಸೆಮಣೆಯೇರಲು ಪ್ರಯತ್ನಿಸುತ್ತಿದ್ದ ಶಿಕ್ಷಕ ವರಮಹಾಶಯನನ್ನು ವಂಚನೆಗೊಳಗಾದ ಪ್ರೇಯಸಿ, ಮಹಿಳಾ ಸಂಘಟನೆ ಮತ್ತು ಪೊಲೀಸರ ಸಹಕಾರದಿಂದ ಪತ್ತೆ ಹಚ್ಚಿ ಇಲ್ಲಿನ ಆಲಂಗಾರು ಮಹಾಲಿಂಗೇಶ್ವರ ದೇವಳದಲ್ಲಿ ವಿವಾಹ ಮಾಡಿಸಿದ ಪ್ರಸಂಗ ಬುಧವಾರ ನಡೆದಿದೆ.

ಇಲ್ಲಿನ ಹೊಸಬೆಟ್ಟು ಸಹಕಾರಿ ಪ್ರೌಢಶಾಲೆ ಶಿಕ್ಷಕ, ಚಿತ್ರದುರ್ಗ ಜಿಲ್ಲೆ ಚಿಕ್ಕೇನಹಳ್ಳಿಯ ಕರಿಬಸಪ್ಪ ಹಾಗೂ ಶೃಂಗೇರಿ ಶಾಂತಿ ಗ್ರಾಮದ ಕೊಗ್ರೆ ಬಟ್ಟಗದ್ದೆಯ ಸುರೇಖಾ ನೂತನ ಸತಿಪತಿಗಳಾಗಿದ್ದು ಇಲ್ಲಿನ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ನಡೆಯಿತು.

ಸುಮಾರು ಹತ್ತು ವರ್ಷಗಳ ಹಿಂದೆ ಕೊಪ್ಪದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಕರಿಬಸಪ್ಪ ಮತ್ತು ಸುರೇಖಾ ಪರಿಚಿತರಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು. ಹಲವು ವರ್ಷ ಪ್ರೇಮಿಗಳಾಗಿದ್ದು ಬಳಿಕ ಕರಿಬಸಪ್ಪ ನಾಪತ್ತೆಯಾಗಿದ್ದ.

2003ರಲ್ಲಿ ಸುರೇಖಾಳ ಹೆತ್ತವರು ಆಕೆಗೆ ಬೆಂಗಳೂರಿನ ರಾಜಾಜಿನಗರದ ನಾಗರಾಜ್ ಎಂಬವರೊಂದಿಗೆ ವಿವಾಹ ನಡೆಸಿದ್ದು ದಂಪತಿಗೆ ರತನ್ ಎಂಬ ಮಗುವಿದೆ. ಆಗ ಇವರ ದಾಂಪತ್ಯ ಅನ್ಯೋನ್ಯವಾಗಿತ್ತು. ಸುರೇಖಾಳಿಗೆ ನಾಗರಾಜನೊಂದಿಗೆ ವಿವಾಹವಾದ ಮಾಹಿತಿಯನ್ನು ಅದು ಹೇಗೋ ಕಲೆ ಹಾಕಿದ ಕರಿಬಸಪ್ಪ ನಾಗರಾಜನ ಸಂಪರ್ಕ ಸಾಧಿಸಿ ಸುರೇಖಾಳೊಂದಿಗೆ ತನಗಿದ್ದ ಸಂಬಂಧವನ್ನು ತಿಳಿಸಿ ಅವರ ದಾಂಪತ್ಯದಲ್ಲಿ ಹುಳಿ ಹಿಂಡಿದ್ದ. ಇದರಿಂದಾಗಿ ಇವರ ದಾಂಪತ್ಯ ಬಿರುಕು ಬಿಟ್ಟಿತ್ತು. ಸಂದರ್ಭದ ಲಾಭ ಪಡೆದ ಕರಿಬಸಪ್ಪ ಸುರೇಖಾಳನ್ನು ಸಂಪರ್ಕಿಸಿ ನಾಗರಾಜನಿಗೆ ಡೈವೋರ್ಸ್ ನೀಡಿದರೆ ಮತ್ತೆ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ. 2009ರಲ್ಲಿ ಚಿಕ್ಕಮಗಳೂರು ನ್ಯಾಯಾಲಯ ಇವರಿಗೆ ಡೈವೋರ್ಸ್ ನೀಡಿತ್ತು.

ಕಳೆದ ಹತ್ತು ತಿಂಗಳ ಹಿಂದೆ ಕರಿಬಸಪ್ಪ ತಾನು ವಾಸವಾಗಿದ್ದ ಮೂಡುಬಿದರೆ ಲೋಕೋಪಯೋಗಿ ಇಲಾಖೆಯ ವಸತಿಗೃಹಕ್ಕೆ ಸುರೇಖಾ ಹಾಗೂ ಆಕೆಯ ಮಗುವನ್ನು ಕರೆತಂದು ತನ್ನ ಸಹೋದರಿಯರೊಂದಿಗೆ ವಾಸಿಸತೊಡಗಿದ. ಸೆಪ್ಟೆಂಬರ್ ಮೊದಲ ವಾರದಲ್ಲಿ ತನ್ನ ಬಟ್ಟೆ ಬರೆಯೊಂದಿಗೆ ನಾಪತ್ತೆಯಾದ ಕರಿಬಸಪ್ಪ ತನ್ನ ಊರಿನಲ್ಲಿ 4 ಲಕ್ಷ ರೂ. ವರದಕ್ಷಿಣೆ ಪಡೆದು ಬೇರೊಬ್ಬಳು ಹುಡುಗಿಯೊಂದಿಗೆ ವಿವಾಹವಾಗಲು ಸಿದ್ಧತೆ ನಡೆಸಿದ್ದ.

ಈ ಮಾಹಿತಿ ಪಡೆದ ಸುರೇಖಾ ಮಹಿಳಾ ಹೋರಾಟಗಾರ್ತಿ ಪುರಸಭೆ ಉಪಾಧ್ಯಕ್ಷೆ ರಮಣಿ ಅವರಿಗೆ ದೂರು ನೀಡಿ ಸಹಾಯ ಕೋರಿದರು. ಅವರ ಸಲಹೆಯಂತೆ ಕರಿಬಸಪ್ಪ ವಿರುದ್ಧ ಸುರೇಖಾ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಕರಿಬಸಪ್ಪ ವಿರುದ್ಧ ವಂಚನೆ ಪ್ರಕರಣ ದಾಖಲಿಸಿ ಆತನ ಸಹೋದರನನ್ನು ವಶಕ್ಕೆ ತೆಗೆದುಕೊಂಡರು.

ತದನಂತರ ಕರಿಬಸಪ್ಪ ಸುರೇಖಾಳನ್ನು ಸಂಪರ್ಕಿಸಿ ವಿವಾಹವಾಗಲು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಬರುವಂತೆ ಅಹ್ವಾನಿಸಿದ. ಆತನ ಕೋರಿಕೆಯಂತೆ ಸುರೇಖಾ ಪೊಲೀಸರು ಹಾಗೂ ರಮಣಿಯೊಂದಿಗೆ ಹೊರನಾಡಿಗೆ ತೆರಳಿ ಅಲ್ಲಿಂದ ಆತನನ್ನು ಕರೆತಂದು ಬುಧವಾರ ಆಲಂಗಾರಿನಲ್ಲಿ ವಿವಾಹವಾಗುವುದರೊಂದಿಗೆ ಪ್ರಕರಣ ಸದ್ಯ ಸುಖಾಂತ್ಯಗೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ