ಬೆಂಗಳೂರು, ಗುರುವಾರ, 16 ಸೆಪ್ಟೆಂಬರ್ 2010( 18:30 IST )
ಬಿಜೆಪಿ ಸರಕಾರವನ್ನು ಕಿತ್ತು ಹಾಕುತ್ತೇವೆ, ಯಡಿಯೂರಪ್ಪ ಅವರನ್ನು ಮನೆಗೆ ಕಳುಹಿಸುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕರು ಈಗ ಉಪ ಚುನಾವಣೆಯ ಸೋಲಿನಿಂದಾಗಿ ಬಳ್ಳಾರಿಯಿಂದ ತೀರ್ಥಯಾತ್ರೆ ಆರಂಭಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಕಡೂರು ಮತ್ತು ಗುಲ್ಬರ್ಗಾ ದಕ್ಷಿಣ ಕ್ಷೇತ್ರದ ಫಲಿತಾಂಶ ಹೊರಬಿದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಿಂದ ಬಳ್ಳಾರಿವರೆಗೆ ಮಾಡಿದ್ದ ಕಾಂಗ್ರೆಸ್ ಮುಖಂಡರು ಈಗ ನಿರಾಳರಾಗಿದ್ದಾರೆ. ಹಾಗಾಗಿ ಇದೀಗ ಬಳ್ಳಾರಿಯಿಂದ ತೀರ್ಥಯಾತ್ರೆಯನ್ನು ಆರಂಭಿಸಲಿ ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ವಿಷಯ ತಿಳಿಯಿತು. ರಾಜೀನಾಮೆಗೆ ಸ್ವಾಗತ. ಮುಂದೆ ಯಾವ ಪಕ್ಷಕ್ಕೆ ಹೋಗ್ತಾರೋ, ಎಲ್ಲಿರುತ್ತಾರೋ ಭಗವಂತನೆ ಬಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಗುಲ್ಬರ್ಗಾ ದಕ್ಷಿಣ ಕ್ಷೇತ್ರದ ಸೋಲನ್ನು ನಾನು ಒಪ್ಪಿಕೊಳ್ಳುತ್ತೇವೆ. ಅಲ್ಲಿ ಅನುಕಂಪದ ಅಲೆ ಮೇಲೆ ಜೆಡಿಎಸ್ ಗೆಲುವು ಸಾಧಿಸಿದೆ. ಆದರೆ ಕಾಂಗ್ರೆಸ್ ನಾಯಕರು ಇನ್ಮುಂದೆ ಸರಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಲಿ ಎಂದು ಸಲಹೆ ನೀಡಿದರು.