ಹಿಂದೂಸ್ತಾನಿ, ಕರ್ನಾಟಕ ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದ, ಭಕ್ತರ ಪಾಲಿಗೆ ನಡೆದಾಡುವ ದೇವರಾಗಿದ್ದ, ಪದ್ಮಭೂಷಣ, ಪಂಡಿತ ಪುಟ್ಟರಾಜ ಗವಾಯಿ (97) ಅವರ ಆರೋಗ್ಯ ಸ್ಥಿತಿ ಉಲ್ಬಣಿಸಿದ್ದು, ಶುಕ್ರವಾರ ವೀರೇಶ್ವರ ಪುಣ್ಯಾಶ್ರಮದಲ್ಲಿ ಮಧ್ಯಾಹ್ನ ವಿಧಿವಶರಾಗಿದ್ದಾರೆ.
WD
ಕಳೆದ ಕೆಲವು ದಿನಗಳಿಂದ ನ್ಯೂಮೋನಿಯದಿಂದ ಬಳಲುತ್ತಿದ್ದ ಅವರನ್ನು ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗವಾಯಿ ಅವರ ಆರೋಗ್ಯ ಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ಭಕ್ತರ ಒತ್ತಾಸೆಯಂತೆ ಗವಾಯಿ ಅವರನ್ನು ವೀರೇಶ್ವರ ಪುಣ್ಯಾಶ್ರಮಕ್ಕೆ ಕರೆತರಲಾಗಿತ್ತು. ಆ ಸಂದರ್ಭದಲ್ಲಿ ಗವಾಯಿಗಳ ಆರೋಗ್ಯ ಸ್ಥಿತಿ ಚೇತರಿಸಿಕೊಳ್ಳುತ್ತಿರುವುದಾಗಿ ಆಶ್ರಮದಲ್ಲಿಯೇ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ತಿಳಿಸಿದ್ದರು.
ಸಾವಿರಾರು ಭಕ್ತರು ಗವಾಯಿಗಳ ಆರೋಗ್ಯ ಚೇತರಿಕೆಗಾಗಿ ಜಾತಿ-ಭೇದ ಮರೆತು ಪ್ರಾರ್ಥನೆ ಸಲ್ಲಿಸಿದ್ದರು. ಆದರೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಗವಾಯಿಗಳಿಗೆ ಚಿಕಿತ್ಸೆ ಫಲಕಾರಿಯಾಗದ ಪರಿಣಾಮ ಇಂದು ಮಧ್ಯಾಹ್ನ 12-30ಕ್ಕೆ ಲಿಂಗೈಕ್ಯರಾದರು.
ಅಂಧರ ಬಾಳಿನ ಬೆಳಕಾಗಿದ್ದ ಗವಾಯಿ: 1914 ಮಾರ್ಚ್ 3ರಂದು ಹಾವೇರಿ ಜಿಲ್ಲೆಯ ಹಾನಗಲ್‌ನ ದೇವರ ಹೊಸಕೋಟೆಯಲ್ಲಿ ಪುಟ್ಟರಾಜ ಗವಾಯಿ ಜನಿಸಿದ್ದರು. ಹುಟ್ಟಿದ ಆರು ತಿಂಗಳಲ್ಲಿಯೇ ಗವಾಯಿ ಅಂಧರಾಗಿದ್ದರು. ಇವರ ಮೂಲ ಹೆಸರು ಪುಟ್ಟಯ್ಯಜ್ಜ ಎಂಬುದಾಗಿತ್ತು. ಅಂತೂ ಅಂಧ ಪುಟ್ಟಯ್ಯಜ್ಜನ ಜೀವನದ ಹೊಣೆಗಾರಿಕೆಯನ್ನು ಮಾವ ಚಂದ್ರಶೇಖರ್ ಹೊತ್ತಿದ್ದರು. ನಂತರ ಪುಟ್ಟಯ್ಯಜ್ಜನಿಗೆ ಸಂಗೀತ ಶಿಕ್ಷಣ ನೀಡುವಂತೆ ಪಂಡಿತ ಪಂಚಾಕ್ಷರಿ ಗವಾಯಿಗಳ ಆಶ್ರಮಕ್ಕೆ ಸೇರಿಸಿದ್ದರು.
ಆ ಸಂದರ್ಭದಲ್ಲಿ ಅಂಧ ಪುಟ್ಟಯ್ಯಜ್ಜ ಹಿಂದೂಸ್ತಾನಿ, ಕರ್ನಾಟಕ ಸಂಗೀತ, ಹಾರ್ಮೋನಿಯಂ ಕಲಿಯುವ ಮೂಲಕ ಸಂಗೀತ ಸಾಮ್ರಾಟ್ ಎಂಬ ಕೀರ್ತಿಗೆ ಭಾಜನರಾಗಿದ್ದರು. ನಂತರ 1944ರಲ್ಲಿ ವೀರೇಶ್ವರ ಆಶ್ರಮದ ಪೀಠಾಧಿಪತಿಯಾಗಿ ಹೊಣೆಗಾರಿಕೆ ವಹಿಸಿಕೊಂಡಿದ್ದರು. ಕಳೆದ ಐದು ದಶಕಗಳಿಂದ ಸಾವಿರಾರು ಅಂಧರಿಗೆ ಶಿಕ್ಷಣ ನೀಡುವ ಮೂಲಕ ಅಂಧರ ಪಾಲಿನ ದೇವರಾಗಿದ್ದರು.
ಗವಾಯಿಗಳಿಗೆ ಸಂದ ಪ್ರಶಸ್ತಿ ನೂರಾರು: ಪುಟ್ಟಯ್ಯಜ್ಜ ಮೂಲ ನಾಮಾಂಕಿತ ಪುಟ್ಟರಾಜ ಗವಾಯಿ ಅವರು ತಾರುಣ್ಯದಲ್ಲೇ ಪಂಡಿತ, ಗವಾಯಿ ಬಿರುದು ಪಡೆದಿದ್ದರು. ಕನ್ನಡ, ಸಂಸ್ಕೃತ, ಹಿಂದಿಯಲ್ಲಿ ಕೃತಿ ರಚಿಸಿದ್ದ ಗವಾಯಿಗಳಿಗೆ ಸಂಗೀತವೆಂದರೆ ಪಂಚಪ್ರಾಣವಾಗಿತ್ತು. ಇವರ ಅಪಾರ ಸೇವೆಯನ್ನು ಪರಿಗಣಿಸಿ ಭಾರತ ಸರಕಾರ ಪದ್ಮಭೂಷಣ ಪ್ರಶಸ್ತಿ, 1975ರಲ್ಲಿ ಕರ್ನಾಟಕ ವಿವಿಯಿಂದ ಗೌವರ ಡಾಕ್ಟರೇಟ್, 1993ರಲ್ಲಿ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ, 2000ನೇ ಇಸವಿಯಲ್ಲಿ ಬಸವಶ್ರೀ ಪ್ರಶಸ್ತಿ, ಚೌಡಯ್ಯ ಪ್ರಶಸ್ತಿ, ನಾಡೋಜ ಗೌರವ, ಕನಕ ಪುರಂದರ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳು ಗವಾಯಿಗಳ ಮುಡಿಗೇರಿತ್ತು. ನಾಟಕ, ಸಾಹಿತ್ಯ ಸೇರಿದಂತೆ ಮೂರು ಭಾಷೆಯಲ್ಲಿ ನೂರಾರು ಕೃತಿ ರಚಿಸಿದ್ದಾರೆ. ಬಹುಭಾಷಾ ಪಂಡಿತರಾಗಿದ್ದ ಗವಾಯಿ ಬ್ರೈಲ್ ಲಿಪಿಯಲ್ಲಿ ಭಗವದ್ಗೀತೆ ರಚಿಸಿದ್ದರು.
ಪಂಡಿತ ಪುಟ್ಟರಾಜ ಗವಾಯಿ ಅವರ ನಿಧನದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಾದ್ಯಂತ ಎರಡು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನಾಳೆ ಮಧ್ಯಾಹ್ನ ಗವಾಯಿ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ವೀರೇಶ್ವರ ಪುಣ್ಯಾಶ್ರಮದ ಮೂಲಗಳು ತಿಳಿಸಿವೆ.