ಕಡೂರು ಹಾಗೂ ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶದಿಂದ ಹಿಗ್ಗುವುದೂ ಇಲ್ಲ, ಕುಗ್ಗುವುದೂ ಇಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಆದ್ದರಿಂದ ಅದರ ಬಗ್ಗೆ ಈಗ ವಿಶ್ಲೇಷಣೆ ಅಗತ್ಯವಿಲ್ಲ ಎಂದರು.
ವೈಎಸ್‌ವಿ ದತ್ತ ಅವರ ಸಮುದಾಯ ಕಡೂರು ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದರೂ ಅವರಿಗೆ ಕಳೆದ ಚುನಾವಣೆಗಿಂತ ಹೆಚ್ಚಿನ ಮತ ಲಭಿಸಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಆ ಕ್ಷೇತ್ರದಿಂದ ಲಭಿಸಿದ ಮತಕ್ಕಿಂತ ಈ ಬಾರಿ ಜೆಡಿಎಸ್‌ಗೆ ಹೆಚ್ಚು ಮತ ಬಂದಿರುವುದು ಪಕ್ಷಕ್ಕೆ ಗಟ್ಟಿ ನೆಲೆ ಇರುವುದನ್ನು ಸಾಬೀತುಪಡಿಸಿದೆ ಎಂದರು. ಸಿದ್ದರಾಮಯ್ಯ ರಾಜೀನಾಮೆ ಕುರಿತು ಕೇಳಿದ ಪ್ರಶ್ನೆಗೆ 'ರಾಜಕೀಯದಲ್ಲಿ ಯಾವ ಸ್ಥಾನವೂ ಶಾಶ್ವತ ಅಲ್ಲ' ಎಂದು ಮಾರ್ಮಿಕವಾಗಿ ನುಡಿದರು.
ಕಡೂರು ಮತ್ತು ಗುಲ್ಬರ್ಗ ಕ್ಷೇತ್ರಗಳಲ್ಲಿ ಜಾತಿ, ಹಣ ಮೆಟ್ಟಿ ನಿಂತು ಮತ ಚಲಾಯಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ ಅವರು, ಚುನಾವಣೆ ಫಲಿತಾಂಶ ಬಂದಾಗಿದೆ. ಮುಂದೆ ಪಕ್ಷ ಸಂಘಟನೆಗೆ ಹೆಚ್ಚು ಗಮನ ನೀಡುವುದಾಗಿ ಹೇಳಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪಕ್ಷದ ಕಚೇರಿಯಲ್ಲಿ ಸೆ.23ರಂದು ಚುನಾವಣೆ ನಡೆಯಲಿದೆ. ಪಕ್ಷದ ರಾಷ್ಟ್ರೀಯ ಸಮಾವೇಶ ಬೆಂಗಳೂರು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅ.10 ಮತ್ತು 11ರಂದು ನಡೆಯಲಿದೆ ಎಂದರು.