ವಿಶ್ವ ವಿಖ್ಯಾತ ಹಂಪಿಗೆ ಹತ್ತಿರವಿರುವ ಹೊಸಪೇಟೆ ನಗರವನ್ನು ಮಾದರಿ ನಗರವನ್ನಾಗಿ ರೂಪಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಸದ್ಯದಲ್ಲೇ ಮುಂಬೈಯಿಂದ ತಂಡವೊಂದು ಆಗಮಿಸಿ 'ಮಾಸ್ಟರ್‌ಪ್ಲ್ಯಾನ್' ರೂಪಿಸಲಿದೆ ಎಂದು ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
ನಗರದ ಅಮರಾವತಿ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಂಪಿ ಅಭಿವೃದ್ಧಿಗೆ 100 ಕೋಟಿ ರೂ. ಮಂಜೂರು ಮಾಡಲಾಗಿದೆ. ಕೇಂದ್ರ ಸರಕಾರ 40 ಕೋಟಿ ರೂ. ನೀಡಿದೆ. ರಾಜ್ಯ ಸರಕಾರ ಉಳಿದ ಹಣ ಮಂಜೂರು ಮಾಡಿದೆ ಎಂದರು. ಬಳ್ಳಾರಿ ನಗರದ ಮಾದರಿಯಲ್ಲೇ ಹೊಸಪೇಟೆ ನಗರವನ್ನೂ ಅಭಿವೃದ್ಧಿಪಡಿಸಲಾಗುವುದು. ಈ ನಗರವನ್ನು ಅಭಿವೃದ್ದಿಗೊಳಿಸಿ ದೇಶ-ವಿದೇಶಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ವಿಶ್ವವಿಖ್ಯಾತ ಹಂಪಿಯ ಅಭಿವೃದ್ಧಿಗಾಗಿ ಈ ತಿಂಗಳ ಅಂತ್ಯದಲ್ಲಿ ಹಂಪಿಯಲ್ಲೇ ವಿಶೇಷ ಸಭೆ ನಡೆಸಲಾಗುವುದು. ಸಭೆಯಲ್ಲಿ ಸ್ಥಳೀಯರಿಂದ ಸಲಹೆ ಸೂಚನೆ ಪಡೆಯಲಾಗುವುದು. ಹಂಪಿಯಲ್ಲಿ ಸದ್ಯದಲ್ಲೇ ಹೆಲಿಟೂರಿಸಂ ಆರಂಭಗೊಳ್ಳಲಿದೆ ಎಂದು ಹೇಳಿದರು.
ಶ್ರೀಕೃಷ್ಣದೇವರಾಯರ ಪುತ್ಥಳಿ ನಿರ್ಮಾಣಕ್ಕೆ 1 ಕೋಟಿ ರೂ. ಮಂಜೂರು ಮಾಡಲಾಗಿದೆ. ಹಂಪಿಯಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿಯವರು ಇತ್ತೀಚೆಗೆ 19 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ದೇಶಕ್ಕೆ ಆಗಮಿಸುವ ಪ್ರವಾಸಿಗರು ನೇರ ಹಂಪಿಗೆ ಬರುವಂತೆ ಮಾಡಲಾಗುವುದು ಎಂದು ತಿಳಿಸಿದರು.