ಬಹುಕೋಟಿ ನಕಲಿ ಛಾಪಾ ಕಾಗದ ಹಗರಣಕ್ಕೆ ಸಂಬಂಧಿಸಿದಂತೆ ಮಡಿವಾಣ ಪೊಲೀಸ್ ಠಾಣೆಯಲ್ಲಿ 2002ರಲ್ಲಿ ಎರಡು ಪ್ರಕರಣದಲ್ಲಿ ದೋಷಿಯಾಗಿರುವ ಕರೀಂಲಾಲ್ ತೆಲಗಿಗೆ ವಿಶೇಷ ನ್ಯಾಯಾಲಯ ಶನಿವಾರ ಏಳು ವರ್ಷ ಜೈಲುಶಿಕ್ಷೆ ವಿಧಿಸಿದೆ.
ನಕಲಿ ಛಾಪಾ ಕಾಗದ ಹಗರಣದ ಎರಡು ಪ್ರಕರಣಗಳ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ ಎರಡು ದಿನಗಳ ಹಿಂದಷ್ಟೇ ತೆಲಗಿ ಸೇರಿದಂತೆ 17 ಮಂದಿಯನ್ನು ದೋಷಿ ಎಂದು ತಿಳಿಸಿದ್ದು, ಇಂದು ಶಿಕ್ಷೆಯ ಪ್ರಮಾಣ ಘೋಷಿಸಿದೆ.
ತೆಲಗಿ ಸೇರಿದಂತೆ 17 ಮಂದಿಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಪಾಟೀಲ್ ಶಿಕ್ಷೆಯ ತೀರ್ಪು ನೀಡಿದರು. ತೆಲಗಿಗೆ ಏಳು ವರ್ಷ ಜೈಲುಶಿಕ್ಷೆ, 50ಸಾವಿರ ರೂಪಾಯಿ ದಂಡ ಹಾಗೂ ಮೂವರು ಆರೋಪಿಗಳಿಗೆ ಮಾಫಿ ನೀಡದೆ ಐದು ವರ್ಷ ಶಿಕ್ಷೆ, ಇನ್ನುಳಿದ 13 ಆರೋಪಿಗಳಿಗೆ ಶಿಕ್ಷೆಯ ಪ್ರಮಾಣದಲ್ಲಿ ಕಡಿತ ಮಾಡಿರುವುದಾಗಿ ವಕೀಲ ನಾಣ್ಯಯ್ಯ ತಿಳಿಸಿದ್ದಾರೆ.
ಬಹುಕೋಟಿ ನಕಲಿ ಛಾಪಾ ಹಗರಣಕ್ಕೆ ಸಂಬಂಧಿಸಿದಂತೆ ತೆಲಗಿ ವಿರುದ್ಧ ಒಟ್ಟು ಏಳು ಪ್ರಕರಣ ದಾಖಲಾಗಿತ್ತು. ಅದರಲ್ಲಿನ ಎರಡು ಪ್ರಕರಣಗಳಲ್ಲಿ ನ್ಯಾಯಾಲಯ ಖುಲಾಸೆಗೊಳಿಸಿದ್ದು, ಐದು ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ. ಮಡಿವಾಣ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ತೆಲಗಿ ಈಗಾಗಲೇ ಅನುಭವಿಸಿರುವ ಶಿಕ್ಷೆಯನ್ನು ಮಾಫಿ ಮಾಡದೆ, ಮತ್ತೆ ಏಳು ವರ್ಷಗಳ ಜೈಲುಶಿಕ್ಷೆಯನ್ನು ಅನುಭವಿಸಬೇಕು ಎಂದು ನ್ಯಾಯಾಧೀಶರು ತೀರ್ಪಿನ ಸಂದರ್ಭದಲ್ಲಿ ತಿಳಿಸಿದ್ದಾರೆ.