ಅಕ್ಟೋಬರ್‌ನಿಂದ ಚೆನ್ನೈ-ಮೈಸೂರು ವಿಮಾನ ಹಾರಾಟ: ವಿಶ್ವನಾಥ್
ಮೈಸೂರು, ಶನಿವಾರ, 18 ಸೆಪ್ಟೆಂಬರ್ 2010( 17:54 IST )
ಅಂತೂ ಇಂತೂ ಈ ವರ್ಷದ ದಸರೆಗೂ ಮುನ್ನ ಮೈಸೂರಿಗೆ ವಿಮಾನ ಹಾರುವುದು ಖಚಿತವಾಗಿದೆ. ಕಿಂಗ್ ಫಿಶರ್ ಸಂಸ್ಥೆಯ ವಿಮಾನ ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗವಾಗಿ ಅಕ್ಟೋಬರ್ ಮೊದಲ ವಾರದಿಂದ ನಿತ್ಯ ಹಾರಾಟ ಮಾಡಲು ಒಪ್ಪಿಗೆ ನೀಡಿದ್ದು, ಸಮಯವನ್ನು ಪ್ರಕಟಿಸಿದೆ ಎಂದು ಲೋಕಸಭೆ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ಮೈಸೂರಿನ ಎಸಿಐಸಿಎಂ ಎಂಜಿನಿಯರ್ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ವಿಮಾನ ನಿಲ್ದಾಣ ಕುರಿತಾದ ಸಭೆಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣ ಪ್ರಾಧಿಕಾರ ಮೈಸೂರಿನ ಅಧಿಕಾರಿ ರಾಜೀವ್ ಗುಪ್ತಾ ಅವರು ವಿಮಾನ ಹಾರಾಟ ಆರಂಭವಾಗುವುದನ್ನು ಖಚಿತಪಡಿಸಿದ್ದಾರೆ ಎಂದರು.
ಏರ್ ಇಂಡಿಯಾ ಸಂಸ್ಥೆಯ ವಿಮಾನಗಳ ಹಾರಾಟಕ್ಕೆ ಸಂಬಂಧಿಸಿ ಈಗಾಗಲೇ ಸಂಸ್ಥೆ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದೇನೆ. ಹೊಸ ವಿಮಾನಗಳ ಖರೀದಿ ಬಳಿಕ ದಕ್ಷಿಣ ಭಾರತಕ್ಕೂ ವಿಮಾನ ಸೇವೆ ವಿಸ್ತರಣೆ ಮಾಡುವುದಾಗಿ ಏರ್ಇಂಡಿಯಾ ಅಧ್ಯಕ್ಷರು ಹೇಳಿದ್ದಾರೆ. ಇದರಿಂದ ಇನ್ನಷ್ಟು ವಿಮಾನಗಳ ಹಾರಾಟ ಸಾಧ್ಯವಾಗಲಿದೆ ಎಂದರು.
ದಸರೆಗೆ ಸಾಕಷ್ಟು ವಿದೇಶಿ ಪ್ರವಾಸಿಗರು ಬರುತ್ತಾರೆ. 180 ದೇಶದ ಹೈ ಕಮಿಷನರ್‌ಗಳಿಗೆ ಪ್ರವಾಸೋದ್ಯಮ ಇಲಾಖೆ ವಿಶೇಷ ಹೊತ್ತಿಗೆಯೊಂದಿಗೆ ಪತ್ರ ಬರೆಯಬೇಕು. ಆಗ ಆಯಾ ದೇಶದಿಂದ ಕನಿಷ್ಟ 10 ಮಂದಿ ಬಂದರೂ 1,800 ವಿದೇಶಿ ಪ್ರವಾಸಿಗರು ದಸರೆಗೆ ಆಗಮಿಸದಂತಾಗುತ್ತದೆ. ಇದರಿಂದ ಆದಾಯವೂ ಬರುತ್ತದೆ. ವಿಮಾನ ಸಂಪರ್ಕವೂ ವಿಸ್ತರಣೆಗೊಳ್ಳುತ್ತದೆ ಎಂದು ಸಲಹೆ ನೀಡಿದರು.