ಬೆಂಗಳೂರು, ಭಾನುವಾರ, 19 ಸೆಪ್ಟೆಂಬರ್ 2010( 11:01 IST )
ಗಾನಯೋಗಿ ಪುಟ್ಟರಾಜ ಗವಾಯಿ ಅವರ ಸ್ಮಾರಕ ಭವನ ನಿರ್ಮಾಣಕ್ಕೆ 5 ಕೋಟಿ ರೂಪಾಯಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಪಂಡಿತ ಪುಟ್ಟರಾಜ ಗವಾಯಿಗಳ ಅಂತಿಮ ದರ್ಶನ ಪಡೆಯಲು ಶನಿವಾರ ಗದುಗಿನ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಸಿಎಂ ಈ ವಿಷಯವನ್ನು ತಿಳಿಸಿದರು.
ಅದೇ ಹೊತ್ತಿಗೆ ಪುಟ್ಟರಾಜ ಅವರಿಗೆ ಮರಣೋತ್ತರ ಭಾರತ ರತ್ನ ನೀಡಬೇಕೆಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಗುವುದು. ಹಾಗೆಯೇ ವೀರಾಶ್ರಮ ಮಠ ಮತ್ತು ಅದರ ಶಿಕ್ಷಣ ಸಂಸ್ಥೆಗಳಿಗೆ ಎಲ್ಲಾ ವಿಧ ಸಹಕಾರ ನೀಡಲು ಸರಕಾರ ಸಿದ್ಧವಿದೆ ಎಂದವರು ತಿಳಿಸಿದರು.
ಶುಕ್ರವಾರ ಲಿಂಗೈಕ್ಯರಾಗಿದ್ದ ಗಾನಯೋಗಿ ಪುಟ್ಟರಾಜ ಗವಾಯಿ ಗೌರವಾರ್ಥ ರಾಜ್ಯದಲ್ಲಿ ಶನಿವಾರ ಸರಕಾರಿ ರಜೆ ಘೋಷಿಸಲಾಗಿತ್ತು. ಅಲ್ಲದೆ ಎರಡು ದಿನಗಳ ಶೋಕಾಚರಣೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿತ್ತು.