ಮೈಸೂರಿನಿಂದ 70 ಕಿ.ಮೀ. ಸುತ್ತಳತೆ ಪ್ರದೇಶಗಳಿಂದ ನಗರಕ್ಕೆ ಬರುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ 'ಒಂದೇ ಟಿಕೆಟ್ ಚಲಾವಣೆ' ಸೇವೆಯನ್ನು ಜಾರಿಗೊಳಿಸುವುದಾಗಿ ಸಾರಿಗೆ ಸಚಿವ ಆರ್. ಅಶೋಕ್ ತಿಳಿಸಿದರು.
ಜವಹರಲಾಲ್ ನೆಹರು ರಾಷ್ಟ್ರೀಯ ನಗರ ಪುನರುಜ್ಜೀವನ ಯೋಜನೆ(ಜೆಎನ್-ನರ್ಮ್) ಅಡಿ ಮೈಸೂರಿನಲ್ಲಿ 23.53 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಗ್ರಾಮಾಂತರ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಂಡ್ಯ, ಪಾಂಡವಪುರ, ಕೆ. ಆರ್.ನಗರ, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಹುಣಸೂರು ಸೇರಿದಂತೆ ಎಲ್ಲ ದಿಕ್ಕುಗಳಿಂದಲೂ ಮೈಸೂರಿಗೆ ಕಾರ್ಯಕ್ಕೆಂದು ಸಾರಿಗೆ ಸಂಸ್ಥೆ ಬಸ್‌ನಲ್ಲಿ ಬರುವ ಜನ, ನಗರದಲ್ಲಿ ಓಡಾಡಲು ಮತ್ತೆ ಸಿಟಿ ಬಸ್‌ಗಳಲ್ಲಿ ಪ್ರತ್ಯೇಕ ಟಿಕೆಟ್ ಖರೀದಿ ಮಾಡಬೇಕು. ಆದರೆ, ಹೊಸ ಪದ್ಧತಿ ಅನುಸಾರ ಈ ಪ್ರದೇಶಗಳಿಂದ ಬರುವ ಪ್ರಯಾಣಿಕರು, ಸಾರಿಗೆ ಸಂಸ್ಥೆ ಬಸ್ನಲ್ಲಿಯೇ ಸ್ವಲ್ಪ ಹೆಚ್ಚು ಹಣ ನೀಡಿ ಒಂದೇ ಟಿಕೆಟ್ ಖರೀದಿ ಮಾಡಿದರೆ, ಆ ಟಿಕೆಟ್ ಸಿಟಿ ಬಸ್‌ಗೂ ಅನ್ವಯಿಸುತ್ತದೆ. ಇದರಿಂದ ಪ್ರಯಾಣಿಕರು ನಗರದಲ್ಲಿ ಎಲ್ಲಿಗೆ ಬೇಕಂದರಲ್ಲಿಗೆ ಓಡಾಡಬಹುದು. ಒಂದಿಷ್ಟು ಹಣವೂ ಉಳಿಯುತ್ತದೆ. ಬೆಂಗಳೂರಿನಲ್ಲಿ ಈಗಾಗಲೇ ಜಾರಿಯಲ್ಲಿರುವ ಈ ಸೇವೆಯನ್ನು ಇನ್ನು ಮುಂದೆ ಮೈಸೂರಿನಲ್ಲೂ ಜಾರಿಗೆ ತರಲಾಗುವುದು ಎಂದರು.
ನೆರೆಹೊರೆ ಜಿಲ್ಲೆಗಳ ಗ್ರಾಮೀಣ ಪ್ರದೇಶದ ಜನ ದಸರಾ ನೋಡಲೆಂದು ಪರಿಚಯಿಸಿರುವ ದಸರಾ ದರ್ಶನ ಕಾರ್ಯಕ್ರಮಕ್ಕಾಗಿ ಈ ಬಾರಿ 300 ಪ್ರತ್ಯೇಕ ಬಸ್‌ಗಳು ಸೇವೆ ನೀಡಲಿವೆ ಎಂದು ತಿಳಿಸಿದರು.