ಹೈಕಮಾಂಡ್ ಯಾವುದೇ ಹುದ್ದೆ ನೀಡಲಿ ನಿಭಾಯಿಸುತ್ತೇನೆ: ಪರಮೇಶ್ವರ್
ಮಧುಗಿರಿ, ಮಂಗಳವಾರ, 21 ಸೆಪ್ಟೆಂಬರ್ 2010( 15:05 IST )
ಪಕ್ಷದ ವರಿಷ್ಠರು ಯಾವುದೇ ಹುದ್ದೆ ನೀಡಿದರೂ ಪ್ರಾಮಾಣಿಕವಾಗಿ ದುಡಿಯುವುದಾಗಿ ಹೇಳುವ ಮೂಲಕ ಶಾಸಕ ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ ಎಂಬುದನ್ನು ಖಚಿತಪಡಿಸಿದ್ದಾರೆ.
ಪಟ್ಟಣದ ಗುರುಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಾವು ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ಕೆಳಹಂತದ ಕಾರ್ಯಕರ್ತನಾಗಿ ಸೇರ್ಪಡೆಗೊಂಡು ನಾಲ್ಕು ಬಾರಿ ಶಾಸಕನಾಗಿ, ಮೂರು ಬಾರಿ ಸಚಿವನಾಗಿ ಉನ್ನತವಾದ ಎಐಸಿಸಿ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತನಾಗಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಪಕ್ಷದ ಪದಾಧಿಕಾರಿಯಾಗಿ ಹಲವು ವರ್ಷ ದುಡಿದಿದ್ದು. ಪಕ್ಷದ ರಾಜಕಾರಣದ ಅನುಭವವೂ ಇದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾವುದೇ ಹುದ್ದೆ ನೀಡಿದರೂ ಕೆಲಸ ಮಾಡುವುದಾಗಿ ಸ್ಪಷ್ಟಪಡಿಸಿದರು.
ಇತ್ತೀಚೆಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಹೆಚ್.ಮುನಿಯಪ್ಪನವರನ್ನು ಭೇಟಿ ಮಾಡಿ ತುಮಕೂರು-ರಾಯದುರ್ಗ ರೈಲ್ವೇ ಮಾರ್ಗದ ಕಾರ್ಯಕ್ಕೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ ಎಂದ ಅವರು ಈಗಾಗಲೇ ಆಂಧ್ರ ಭಾಗದಲ್ಲಿ ಈ ರೈಲ್ವೇ ಯೋಜನೆ ಸಂಬಂಧ ಸರ್ವೆ ಕಾರ್ಯ ಹಾಗೂ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಕರ್ನಾಟಕ ಭಾಗದಲ್ಲಿ ಮಾತ್ರ ಈ ಕಾರ್ಯ ಆಗಬೇಕಾಗಿದೆ. ಈ ಯೋಜನೆ ಜಾರಿಗೆ ಹಣ ಬಿಡುಗಡೆಗೆ ಕೇಂದ್ರ ಸಚಿವರು ಸಮ್ಮತಿಸಿದ್ದಾರೆ ಎಂದರು.
ಇಲ್ಲಿನ ಪುರಸಭೆ ಅಧಿಕಾರ ಕಾಂಗ್ರೆಸ್ ಕೈ ತಪ್ಪಲು ನಾಯಕತ್ವ ಕೊರತೆಯೇ ಕಾರಣ ಎಂಬ ತಾ.ಪಂ ಸದಸ್ಯರ ಆರೋಪಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು, ಇದು ಅವರು ವೈಯಕ್ತಿಕ ಅಭಿಪ್ರಾಯ. ಅದಕ್ಕೆ ನಾನು ಪ್ರತಿಕ್ರಿಯಿಸಲಾರೆ. ಬ್ಲಾಕ್ ಕಾಂಗ್ರೆಸ್ ಸಮಿತಿಯವರು ಈ ಬಗ್ಗೆ ಠರಾವು ಮಾಡಿದ್ದರೆ ಪ್ರತಿಕ್ರಿಯೆ ನೀಡುತ್ತಿದ್ದೆ ಎಂದರು.