ಕನ್ನಡ ವಿರೋಧಿ ಪ್ರವೃತ್ತಿ ಮತ್ತು ತಿರಸ್ಕಾರ ಮನೋಭಾವವನ್ನು ರಾಜ್ಯ ಸರಕಾರ ಸಹಿಸುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಎಚ್ಚರಿಕೆ ನೀಡಿದ್ದಾರೆ.
ಖಾನಾಪುರ ಪಟ್ಟಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏರ್ಪಡಿಸಿದ್ದ ಗಡಿ ಭಾಷಾ ಭಾವೈಕ್ಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಭಾಷೆ ತಿರಸ್ಕರಿಸುವ ಮನೋಭಾವ ಒಪ್ಪಲಾಗದು. ನಾಡಿನ ಭಾಷೆ ಕುರಿತು ಉದಾಸೀನತೆ ತೋರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶಿಕ್ಷಕರು ಕನ್ನಡವನ್ನು ಕಡ್ಡಾಯವಾಗಿ ಬೋಧಿಸಬೇಕು. ಆಡಳಿತದಲ್ಲಿ ಕನ್ನಡ ಕಡ್ಡಾಯಕ್ಕೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರಾಥಮಿಕ ಶಿಕ್ಷಣದಲ್ಲಿ ಮಾತೃ ಭಾಷೆ ಕಡ್ಡಾಯಗೊಳಿಸುವ ರಾಜ್ಯ ಸರಕಾರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಕಾರಣ ಕೇಂದ್ರ ಸರಕಾರ ರಾಜ್ಯದ ಪರವಾಗಿ ಅಫಿಡವಿಟ್ ಸಲ್ಲಿಸಿ ವಿಚಾರಣೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಗಡಿ ಮಾತ್ರವಲ್ಲದೇ ಹೊರ ರಾಜ್ಯದಲ್ಲಿಯೂ ಕನ್ನಡಕ್ಕೆ ಪ್ರಾಮುಖ್ಯತೆ ನೀಡುವಂತಾಗಬೇಕಿದೆ. ಭಾಷಾಭಿಮಾನ ಬೆಳೆಸುವಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡಪರ ಸಂಘಟನೆಗಳು, ಕನ್ನಡ ಹೋರಾಟಗಾರರು ಶ್ರಮಿಸುತ್ತಿದ್ದಾರೆ. ಇದೊಂದು ಸಾಂಸ್ಕೃತಿಕ ಆಂದೋಲನವಾಗಿ ರೂಪುಗೊಳ್ಳುತ್ತಿದೆ. ಇದಕ್ಕೆ ಸರಕಾರದ ಸಂಪೂರ್ಣ ಸಹಕಾರವಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಉಳಿಯಲು ರೈತರ ಕೊಡುಗೆ ಅಪಾರವಾಗಿದೆ. ಕನ್ನಡಕ್ಕೆ ಕಾನ್ವೆಂಟ್ ಸಂಸ್ಕೃತಿ ಬೇಡವಾಗಿದೆ. ಕನ್ನಡಕ್ಕೆ ಗೌರವ ನೀಡುವುದು ಇಲ್ಲಿ ನೆಲೆಸಿರುವ ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.