ಹುಬ್ಬಳ್ಳಿ, ಬುಧವಾರ, 22 ಸೆಪ್ಟೆಂಬರ್ 2010( 13:42 IST )
ಪಂಡಿತ ಪುಟ್ಟರಾಜ ಗವಾಯಿಗಳ ಗೌರವಾರ್ಥ ಶೋಕಾಚರಣೆ ಜಾರಿಯಲ್ಲಿದ್ದಾಗ ಕೆಲ ವೈದ್ಯರು ಮತ್ತು ಸಿಬ್ಬಂದಿ ಮೋಜು ಮಾಡಿದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಹುಬ್ಬಳ್ಳಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್) ನಿರ್ದೇಶಕ ಡಾ.ಎಂ.ಜಿ.ಹಿರೇಮಠ ತಮ್ಮ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಗವಾಯಿಗಳ ಗೌರವಾರ್ಥ ರಾಜ್ಯದಲ್ಲಿ ಶೋಕಾಚರಣೆ ಜಾರಿಯಲ್ಲಿದ್ದರೂ ಕೂಡ ಕಿಮ್ಸ್ ವೈದ್ಯರು, ನಿರ್ದೇಶಕರು ಗುಂಡು ಪಾರ್ಟಿ ಮಾಡಿ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಈ ಘಟನೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಸೆ.18ರಂದು ನಗರದ ಗೋಕುಲ ಗಾರ್ಡನ್ ಸಭಾಂಗಣ ಮತ್ತು ರೆಸ್ಟೋರೆಂಟ್‌ನಲ್ಲಿ ನಡೆದ ಘಟನೆಗೆ ನಾನು ಯಾವುದೇ ರೀತಿಯ ಹೊಣೆಗಾರನಲ್ಲ ಎಂದು ತಿಳಿಸಿದ ಹಿರೇಮಠ, ಆದರೂ ತಾನು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದರು.
ಶೋಕಾಚರಣೆಯ ದಿನದಂದು ಭೋಜನ ಮುಗಿಸಿ ನಾವೆಲ್ಲ ಮನೆಗೆ ತೆರಳಿದ್ದೆವು. ನಂತರ ಹೊರ ರಾಜ್ಯದಿಂದ ಬಂದ ಕೆಲವು ವೈದ್ಯರು ಸಮೀಪದ ಬಾರ್‌ಗೆ ಹೋಗಿ ಮದ್ಯಪಾನ ಮಾಡಿ ಬಂದು ಮೋಜು-ಮಸ್ತಿಯಲ್ಲಿ ತೊಡಗಿದ್ದರು. ಇದಕ್ಕೂ ಕಿಮ್ಸ್ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಅಲ್ಲದೇ ಕಾರ್ಯಕ್ರಮಕ್ಕೆ ಸರಕಾರದಿಂದ ಯಾವುದೇ ಆರ್ಥಿಕ ನೆರವು ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿರುವ ಹಿರೇಮಠ, ಕಿಮ್ಸ್ ಹಳೆ ವಿದ್ಯಾರ್ಥಿಗಳ ಸಂಘ ಸಂಗ್ರಹಿಸಿದ ಹಣವನ್ನಷ್ಟೇ ಬಳಸಲಾಗಿದೆ ಎಂದರು.
ಗವಾಯಿಗಳ ಅಂತ್ಯ ಕ್ರಿಯೆಯ ದಿನ ನಡೆದ ಮೋಜು ಕೂಟಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರಕಾರ ಕಿಮ್ಸ್ ನಿರ್ದೇಶಕರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.