ರಾಜ್ಯದ ನಾನಾ ಕಡೆ ಇದುವರೆವಿಗೆ 18 ಉದ್ಯೋಗ ಮೇಳಗಳನ್ನು ನಡೆಸಿದ್ದು, ಇಲ್ಲಿ ನೋಂದಣಿ ಮಾಡಿಸಿಕೊಂಡ 3 ಲಕ್ಷ ಜನರಲ್ಲಿ 1.52 ಲಕ್ಷ ಮಂದಿಗೆ ಉದ್ಯೋಗ ಒದಗಿಸಲಾಗಿದೆ ಎಂದು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಹೇಳಿದರು.
ತಾಲೂಕಿನ ದೊಡ್ಡದುನ್ನಸಂದ್ರದಲ್ಲಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿ, ಮುಂದಿನ 3 ವರ್ಷಗಳಲ್ಲಿ 8 ಲಕ್ಷ ಉದ್ಯೋಗ ಸೃಷ್ಟಿಗೆ ಅನುವಾಗುವಂತೆ ಯೋಜನೆ ರೂಪಿಸಲಾಗಿದೆ ಎಂದರು.
ರಾಜ್ಯದ ಪ್ರತಿ ತಾಲೂಕಿನಲ್ಲೂ ಕೈಗಾರಿಕಾ ತರಬೇತಿ ಕೇಂದ್ರ ಸ್ಥಾಪಿಸಿದ್ದು, ಹಾಲಿ 1154 ಕೇಂದ್ರಗಳಲ್ಲಿ 1.40 ಲಕ್ಷ ವಿದ್ಯಾರ್ಥಿಗಳು ನಾನಾ ವೃತ್ತಿಗಳ ತರಬೇತಿ ಪಡೆಯುತ್ತಿದ್ದಾರೆ. ಮಹಿಳೆಯರಿಗೂ ವೃತ್ತಿ ತರಬೇತಿ ಪಡೆಯುವ ಅವಕಾಶ ಕಲ್ಪಿಸುವ ಉದ್ದೇಶದಿಂದ 26 ತರಬೇತಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಈಗಾಗಲೇ ಹೊಸಕೋಟೆಯಲ್ಲಿ 2 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಲ್ಲಿ 290 ವಿದ್ಯಾರ್ಥಿಗಳಿಗೆ 9 ಉಪಯುಕ್ತ ವೃತ್ತಿಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನ ವಲಯ ಸ್ಥಾಪಿಸಲು ಸರಕಾರ ಉದ್ದೇಶಿಸಿತ್ತು. ಆದರೆ ಕೃಷಿ ಜಮೀನು ಸ್ವಾಧೀನದಿಂದ ಉಂಟಾಗಬಹುದಾದ ಸಮಸ್ಯೆ ಮನಗಂಡು ಉದ್ದೇಶಿತ ವಲಯವನ್ನು ದೇವನಹಳ್ಳಿಗೆ ಸ್ಥಳಾಂತರಿಸಲಾಗಿದೆ. 2 ಎಕರೆ ಸರಕಾರಿ ಭೂಮಿಯಲ್ಲಿ ಅಂದಾಜು 3.70 ಕೋಟಿ ರೂ. ವೆಚ್ಚದ ಕಟ್ಟಡ ನಿರ್ಮಿಸಲು ಉದ್ದೇಶಿಸಿದ್ದು, 18 ತಿಂಗಳಲ್ಲಿ ಕಾಮಗಾರಿ ಪೂರೈಸುವ ಗುರಿ ಹೊಂದಲಾಗಿದೆ. ಇದರಿಂದ ಸುತ್ತಮುತ್ತಲ ಗ್ರಾಮಗಳ ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಅಗತ್ಯವಿರುವ ಕೌಶಲ ಪಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.