ಉಪ ಚುನಾವಣೆಯ ಸೋಲಿನ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ವಿಧಾನಸಭೆ ಪ್ರತಿಪಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ತಿರಸ್ಕೃತಗೊಂಡಿದೆ.
ರಾಜೀವಾಮೆ ಪತ್ರ ತಲುಪಿದ ನಂತರ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ರಾಜೀನಾಮೆಯನ್ನು ತಿರಸ್ಕರಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಉಪ ಚುನಾವಣೆಯ ಫಲಿತಾಂಶ ಅನಿರೀಕ್ಷಿತವಾಗಿದೆ. ಸೋಲಿನ ಹೊಣೆ ಕೆಪಿಸಿಸಿಯ ಎಲ್ಲರ ಮೇಲೂ ಇದ್ದು, ಸೋಲಿಗೆ ಹತಾಶರಾಗದೆ ನಿಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಪಕ್ಷವನ್ನು ಬೆಳೆಸಲು ತೊಡಗಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಡೂರು ಉಪ ಚುನಾವಣೆಯ ಉಸ್ತುವಾರಿ ಹೊತ್ತಿದ್ದ ಸಿದ್ದರಾಮಯ್ಯ ಸೋಲಿನ ಹೊಣೆ ಹೊತ್ತು ಫಲಿತಾಂಶದ ದಿನವೇ ಫ್ಯಾಕ್ಸ್ ಮೂಲಕ ಸೋನಿಯಾಗಾಂಧಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದರು. ಆದರೆ ಸಿದ್ದರಾಮಯ್ಯ ಅವರ ಈ ನಿರ್ಧಾರಕ್ಕೆ ರಾಜ್ಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿ ಯಾವುದೇ ಕಾರಣಕ್ಕೂ ರಾಜೀನಾಮೆ ಅಂಗೀಕರಿಸದಂತೆ ಸೋನಿಯಾ ಅವರನ್ನು ಕೋರಿದ್ದರು.