ಬೆಂಗಳೂರು, ಗುರುವಾರ, 23 ಸೆಪ್ಟೆಂಬರ್ 2010( 11:33 IST )
ಉಪ ಚುನಾವಣೆಯ ಸೋಲಿನಿಂದಾಗಿ ಹೈರಾಣಾಗಿದ್ದ ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಅಸಮಾಧಾನ ಸ್ಫೋಟಗೊಳ್ಳತೊಡಗಿದ್ದು, ಎಐಸಿಸಿ ರಾಜ್ಯ ಉಸ್ತುವಾರಿ ಗುಲಾಂ ನಬಿ ಆಜಾದ್ ಸಮ್ಮುಖದಲ್ಲೇ ಕಾರವಾರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ವಿರುದ್ಧ ಧಿಕ್ಕಾರ ಕೂಗಿದ ಘಟನೆ ಬುಧವಾರ ನಡೆದಿದೆ.
ರಾಮಜನ್ಮಭೂಮಿ ಕುರಿತ ತೀರ್ಪಿನ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವ ಬಗ್ಗೆ ಗುಲಾಂ ನಬಿ ಆಜಾದ್ ಕಾಂಗ್ರೆಸ್ ಜಿಲ್ಲಾ ಮುಖಂಡರ ಜತೆ ಕೆಪಿಸಿಸಿ ಕಚೇರಿಯಲ್ಲಿ ಸಮಾಲೋಚನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕಾರವಾರದಿಂದ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ದೇಶಪಾಂಡೆ ವಿರುದ್ಧ ಘೋಷಣೆ ಕೂಗಿದರು.
ಕಾರವಾರದಿಂದ ಬಂದ ನಮಗೆ ಅನ್ಯಾಯವಾಗಿದೆ. ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಕಚೇರಿಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರು ಆಜಾದ್ ಜತೆಗಿದ್ದ ದೇಶಪಾಂಡೆ ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಸಾಕಷ್ಟು ಗೊಂದಲ, ಘೋಷಣೆ ಕೂಗುವ ಮೂಲಕ ಕೋಲಾಹಲವೇ ಎದ್ದಿತ್ತು, ನಂತರ ಉಳಿದ ಮುಖಂಡರು ಅವರನ್ನು ಸಮಾಧಾನಪಡಿಸಿ ಹೊರಕಳುಹಿಸಿದರು.