ಸಂಪುಟ ಪುನಾರಚನೆಯಲ್ಲಿ ಶಾಸಕರ, ಸಚಿವರ ಹಾಗೂ ರೆಡ್ಡಿ ಬ್ರದರ್ಸ್ ಬೆದರಿಕೆಯನ್ನು ಲೆಕ್ಕಿಸದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಿಟ್ಟ ನಿರ್ಧಾರ ಕೈಗೊಂಡು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರೆ, ಮತ್ತೊಂದೆಡೆ ರಾಜಕೀಯ ಬೆಳವಣಿಗೆಯಲ್ಲಿ ರೆಡ್ಡಿ ಸಹೋದರರ ನಡವಳಿಕೆ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶಹಬ್ಬಾಸ್ಗಿರಿ ನೀಡಿದ್ದಾರೆ!
ನಗರದಲ್ಲಿ ಬುಧವಾರ ಜಿಲ್ಲಾ ಪಂಚಾಯ್ತಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈವರೆಗೂ ಆಡಳಿತಾರೂಢ ಸರಕಾರದ ಜೊತೆ ರೆಡ್ಡಿ ಸಹೋದರರ ವಿರುದ್ಧ ಕಿಡಿಕಾರುತ್ತಿದ್ದ ಗೌಡರು ಹೊಗಳಿಕೆಯ ಮಾತನ್ನಾಡಿ ಅಚ್ಚರಿ ಮೂಡಿಸಿದ್ದಾರೆ.
ರೆಡ್ಡಿ ಸಹೋದರರು ಈ ಮೊದಲು ಮಾಡಿದ ಹಾರಾಟ, ಕಸರತ್ತು ಸ್ವಾರ್ಥದಿಂದ ಕೂಡಿತ್ತು. ಆದರೆ ಇದೀಗ ಯಡಿಯೂರಪ್ಪ ಅವರು ಸಂಪುಟದಿಂದ ಕೈಬಿಟ್ಟಿರುವ ಮೂವರು ಸಚಿವರ ಪರ ವಕಾಲತ್ತು ವಹಿಸಿ ಮಾತನಾಡುತ್ತಿರುವುದು ನಿಜಕ್ಕೂ ಮೆಚ್ಚಲೇಬೇಕು ಎಂದು ಗೌಡರು ಮುಕ್ತಕಂಠದಿಂದ ಹೊಗಳಿದ್ದಾರೆ.
ಈ ನಡವಳಿಕೆಯಿಂದ ರೆಡ್ಡಿ ಸಹೋದರರು ತಮ್ನನ್ನು ನಂಬಿದವರನ್ನು ಕೈಬಿಡುವುದಿಲ್ಲ ಎಂಬುದು ತಿಳಿಯುತ್ತದೆ. ಸಂಪುಟದಿಂದ ಕೈಬಿಟ್ಟವರ ಪರವಾಗಿ ಧ್ವನಿ ಎತ್ತಿರುವ ರೆಡ್ಡಿ ಸಹೋದರರ ವರ್ತನೆಯಲ್ಲಿ ಯಾವುದೇ ಸ್ವಾರ್ಥ ಇಲ್ಲ ಎಂಬುದಾಗಿಯೂ ಗೌಡರು ತಿಳಿಸಿದರು.