ಪಾಂಡವಪುರ, ಗುರುವಾರ, 23 ಸೆಪ್ಟೆಂಬರ್ 2010( 16:20 IST )
ಕೇಂದ್ರ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯಸಭೆ ಉಪ ಸಭಾಪತಿ ಕೆ.ರೆಹಮಾನ್ ಖಾನ್ ಆರೋಪಿಸಿದ್ದಾರೆ.
ಪಟ್ಟಣದ ಕ್ರೀಡಾಂಗಣದಲ್ಲಿ ಕೇಂದ್ರ ಸರಕಾರದ ವಾರ್ತಾ ಶಾಖೆ, ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳಿಂದ ನಡೆದ ಭಾರತ ನಿರ್ಮಾಣ, ಸಾರ್ವಜನಿಕ ಮಾಹಿತಿ ಆಂದೋಲನ ಮತ್ತು ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪಡೆದು 6 ದಶಕ ಕಳೆದರೂ ದೇಶದ ಚಿತ್ರಣ ಮಾತ್ರ ಬದಲಾಗಿಲ್ಲ. ಬಡತನ, ನಿರುದ್ಯೋಗ, ಅಸಮಾನತೆ ನಿವಾರಣೆಯಾಗಿಲ್ಲ. ಸರಕಾರದ ಅದೆಷ್ಟೊ ಸವಲತ್ತುಗಳು ಇನ್ನೂ ಗ್ರಾಮೀಣರಿಗೆ ತಲುಪಿಲ್ಲ. ಯೋಜನೆಗಳನ್ನು ತಲುಪಿಸುವ ಮಾತಿರಲಿ. ಮಾಹಿತಿಯನ್ನೂ ತಲುಪಿಸಿಲ್ಲ. ಪ್ರತಿಯೊಬ್ಬರಿಗೂ ಯೋಜನೆಗಳ ಮಾಹಿತಿ ದೊರಕುವಂತಾಗಬೇಕು ಎಂದೇ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕೇಂದ್ರದ ಯುಪಿಎ ಸರಕಾರವು ಎಲ್ಲ ರಾಜ್ಯಗಳ ಅಭಿವೃದ್ದಿಗೆ ಕೋಟಿಗಟ್ಟಲೆ ಅನುದಾನ ನೀಡುತ್ತಿದೆ. ಅದೆಲ್ಲವು ಜನತೆಯನ್ನು ಮುಟ್ಟಿಲ್ಲ. 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣಕ್ಕಾಗಿ ಕರ್ನಾಟಕಕ್ಕೆ 34 ಕೋಟಿ ರೂ. ಅನುದಾನ ಬಂದಿದೆ ಎಂದು ವಿವರಿಸಿದರು.
ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ನ್ಯೂಯಾರ್ಕ್‌ನಲ್ಲಿ ಮಿಲೇನಿಯಂ ಡೆವಲಪ್‌ಮೆಂಟ್ ಗೋಲ್ಡ್ ಕಾರ್ಯಕ್ರಮದಡಿ ದೇಶದ ಅಭಿವೃದ್ದಿ ಸಂಬಂಧ ಚರ್ಚಿಸಿದ್ದಾರೆ. ಅದರಿಂದ ದೇಶಕ್ಕೆ 500 ಬಿಲಿಯನ್ ಡಾಲರ್ ಅನುದಾನ ದೊರಕುತ್ತಿದೆ ಎಂದು ರೆಹಮಾನ್ ಖಾನ್ ತಿಳಿಸಿದರು.