ಹೊಳಲ್ಕೆರೆ, ಗುರುವಾರ, 23 ಸೆಪ್ಟೆಂಬರ್ 2010( 16:23 IST )
ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವಕ್ಕೆ ಮೊದಲಿನಿಂದಲೂ ಬೆಂಬಲ ಹಾಗೂ ನಿಷ್ಠೆ ವ್ಯಕ್ತಪಡಿಸಿದ್ದೇನೆ. ಬಳ್ಳಾರಿ ರೆಡ್ಡಿ ಬಣದ ಜತೆ ಎಂದೂ ಹೋಗುವುದಿಲ್ಲ, ಗುರುತಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ರೆಡ್ಡಿ ಸಹೋದರರು ಮಂಗಳವಾರ ಸಚಿವ ಶೆಟ್ಟರ್ ನಿವಾಸದಲ್ಲಿ ನಡೆಸಿದ ಸಮಾಲೋಚನಾ ಸಭೆಯಲ್ಲಿ ನಾನು ಭಾಗವಹಿಸಿಲ್ಲ. ಅಕ್ಕ ಸಮ್ಮೇಳನದಿಂದ ಸ್ವದೇಶಕ್ಕೆ ಬಂದವನೇ ನೇರವಾಗಿ ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸಿದ್ದೇನೆ. ಮಂಗಳವಾರ ಕ್ಷೇತ್ರದ ಜನತೆಯ ಕುಂದು-ಕೊರತೆ ಆಲಿಸಲು ಹೊಳಲ್ಕೆರೆ ಪ್ರವಾಸಿ ಮಂದಿರದಲ್ಲಿದ್ದೆ. ಮುಖ್ಯಮಂತ್ರಿ ಬದಲಾವಣೆ ಕುರಿತು ದಿಲ್ಲಿಗೆ ತೆರಳುವ ನಿಯೋಗದಲ್ಲಿ ನನ್ನ ಹೆಸರು ಬರಲು ಸಾಧ್ಯವಿಲ್ಲ. ಇದೆಲ್ಲ ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದರು.
ಸಚಿವ ಸ್ಥಾನದ ಬಗ್ಗೆ ನಾನೆಂದೂ ತಲೆಕೆಡಿಸಿಕೊಂಡಿಲ್ಲ. ರೆಡ್ಡಿ ಗುಂಪಿನಲ್ಲಿ ಸೇರಿ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ವಿರುದ್ಧ ಯಾವುದೇ ಪಿತೂರಿ ನಡೆಸಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದರು.
ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿದ್ದು ಸರಿಯಲ್ಲ. ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರ ರಚನೆಯಲ್ಲಿ ಗೂಳಿಹಟ್ಟಿ ಪಾತ್ರ ಗಣನೀಯ. ಸಂಖ್ಯಾಬಲದ ಕೊರತೆಯಿಂದ ಬಳಲುತ್ತಿದ್ದ ಬಿಜೆಪಿಗೆ ಪಕ್ಷೇತರ ಶಾಸಕರಾಗಿಯೂ ಸರಕಾರಕ್ಕೆ ಬೇಷರತ್ ಬೆಂಬಲ ನೀಡಿದ್ದಾರೆ. ಸರಕಾರ ರಚನೆಗೆ ಶ್ರಮಿಸಿದ್ದಾರೆ. ಪಕ್ಷದ ನೆರವಿಗೆ ಬಂದವರನ್ನು ಕೈಬಿಡುವುದರಲ್ಲಿ ಅರ್ಥವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.