ಪುತ್ತೂರು, ಗುರುವಾರ, 23 ಸೆಪ್ಟೆಂಬರ್ 2010( 16:25 IST )
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಡಿದ ಸಂಪುಟ ಸರ್ಜರಿಯನ್ನು ಸಂಸದ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ದೂರದೃಷ್ಟಿಯಿಂದ ಕೆಲಸ ಮಾಡಿದ್ದಾರೆ. ಸಂಪುಟ ವಿಸ್ತರಣೆಯಿಂದ ಪಕ್ಷದಲ್ಲಿ ಯಾವುದೇ ಗೊಂದಲ ಉಂಟಾಗಿಲ್ಲ. ಎಲ್ಲರೂ ತಮ್ಮ ಭಾವನೆ ಅಥವಾ ಅನಿಸಿಕೆ ಹೇಳಿದ್ದಾರೆ. ಅವುಗಳಿಗೆ ಬೇರೆ ಯಾವುದೇ ಅರ್ಥ ಕಟ್ಟುವ ಅಗತ್ಯವಿಲ್ಲ. ಅವರ ಅಸಮಾಧಾನ ಏನಿದ್ದರೂ ತಾತ್ಕಾಲಿಕ ಎಂದರು.
ಎಲ್ಲ ಬಿಜೆಪಿ ಶಾಸಕರೂ ಸಮರ್ಥರೇ ಇದ್ದಾರೆ. ಹಾಗೆಂದು ಎಲ್ಲರನ್ನೂ ಮಂತ್ರಿ ಮಾಡಲಾಗುವುದೇ ಎಂದು ಪ್ರಶ್ನಿಸಿದ ಅವರು, ಸೀಮಿತ ಅವಕಾಶವನ್ನು ಸಮರ್ಥವಾಗಿ ಬಳಸುವುದು ಅನಿವಾರ್ಯ. ಅದನ್ನು ಯಡಿಯೂರಪ್ಪ ಮಾಡಿದ್ದಾರೆ. ಇದಕ್ಕೆ ಹೈಕಮಾಂಡ್ ಕೂಡಾ ಮನ್ನಣೆ ನೀಡಿದೆ ಎಂದರು.
ಮುಂಬಯಿ-ಕಾರವಾರ- ಮಂಗಳೂರು ರೈಲನ್ನು ಸುಬ್ರಹ್ಮಣ್ಯ ತನಕ ವಿಸ್ತರಿಸಬೇಕು ಎಂದು ರೈಲ್ವೆ ಸಚಿವರಿಗೆ ಕೇಳಿಕೊಂಡಿದ್ದೇನೆ. ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳದ ಯಾತ್ರಾರ್ಥಿಗಳಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ವಿವರಿಸಿದ್ದೇನೆ. ಸಚಿವರು ಪೂರಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ. ಮಂಗಳೂರಿನ ಎರಡೂ ರೈಲ್ವೆ ನಿಲ್ದಾಣಗಳ ಪ್ಲ್ಯಾಟ್‌ಫಾರಂ ವಿಸ್ತರಿಸಬೇಕು ಎಂದು ಕೇಳಿಕೊಳ್ಳಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.