ಬೆಂಗಳೂರು, ಗುರುವಾರ, 23 ಸೆಪ್ಟೆಂಬರ್ 2010( 18:09 IST )
ಜಾತ್ಯತೀತ ಜನತಾದಳ ಕಚೇರಿಯಲ್ಲಿ ರಾತ್ರಿ ಕಾವಲಿಗಿದ್ದ ಸೆಕ್ಯುರಿಟಿಗಾರ್ಡ್‌ನ ಮರ್ಮಾಂಗವನ್ನು ಕತ್ತರಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಕಳೆದ 20 ವರ್ಷಗಳಿಂದ ಜೆಡಿಎಸ್ ಕಚೇರಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಶ್ರೀರಾಂಪುರದ ಮುನಿಯಪ್ಪ (52) ಕೊಲೆಯಾಗಿದ್ದಾರೆ. ಕಚೇರಿಯಲ್ಲಿ ಇದ್ದವರು ಮಂಗಳವಾರ ರಾತ್ರಿ 9.30ರ ನಂತರ ಮನೆಗೆ ತೆರಳಿದ್ದು ನಂತರ ಒಳಗಿದ್ದ ಮುನಿಯಪ್ಪನನ್ನು ಮೇಲಿನ ಮಹಡಿ ಹತ್ತುವ ಮೆಟ್ಟಿಲುಗಳ ಸಮೀಪ ಮರ್ಮಾಂಗವನ್ನು ಕತ್ತರಿಸಿ, ಚಾಕುವಿನಿಂದ ಇರಿದು ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಕೊಲೆಗೆ ಕಾರಣ ತಿಳಿದು ಬಂದಿಲ್ಲ. ತಂದೆಯ ನಿಧನದ ನಂತರ ಮುನಿಯಪ್ಪನಿಗೆ ಜೆಡಿಎಸ್ ಕಚೇರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ನೀಡಲಾಗಿತ್ತು. ಮುನಿಯಪ್ಪಗೆ ಒಂದು ಗಂಡು, ಒಂದು ಹೆಣ್ಣು ಮಕ್ಕಳಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಜೆಡಿಎಸ್ ವಕ್ತಾರ ವೈಎಸ್‌ವಿ ದತ್ತ, ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತ ಗೋಪಾಲ್ ಹೊಸೂರ್, ಡಿಸಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.