ಬೆಂಗಳೂರು, ಗುರುವಾರ, 23 ಸೆಪ್ಟೆಂಬರ್ 2010( 18:27 IST )
ನಗರದ ನಿರ್ಮಲ ಶೌಚಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರುಗಳನ್ನು ಸೇವೆಯಿಂದ ತೆಗೆದು ಹಾಕಿರುವುದನ್ನು ಖಂಡಿಸಿ 15ಕ್ಕೂ ಹೆಚ್ಚು ಮಂದಿ ಪೌರ ಕಾರ್ಮಿಕರು ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ತಮ್ಮ ತಲೆಯ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿದರು.
ಕೂಡಲೇ ನಿರ್ಮಲ ಶೌಚಾಲಯಗಳಲ್ಲಿ ಸೇವೆಯನ್ನು ಮುಂದುವರಿಸಬೇಕು ಇಲ್ಲದಿದ್ದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಮಲ ಎರಚುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಏಕಾಏಕಿ ಪೌರ ಕಾರ್ಮಿಕರನ್ನು ತೆಗೆದು ಹಾಕಿ ಮುಂಬೈ ಮೂಲದ ಕಂಪನಿಯೊಂದಕ್ಕೆ ನೀಡಿರುವ ಬಿಬಿಎಂಪಿ ಆಯುಕ್ತ ಸಿದ್ದಯ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ನಮಗೆ ಬೇರೆ ಕೆಲಸ ಗೊತ್ತಿಲ್ಲ ಹಾಗಾಗಿ ಈ ಸೇವೆಯಲ್ಲಿ ತಮ್ಮನ್ನು ಮುಂದುವರಿಸಬೇಕೆಂದು ಅವರು ಒತ್ತಾಯಿಸಿದರು.
ಪ್ರತಿಭಟನೆ ಸಂದರ್ಭದಲ್ಲಿ ಅವರು ತಮ್ಮ ತಲೆಯ ಮೇಲೆ ಮಲ ಸುರಿದುಕೊಳ್ಳುವ ಮೂಲಕ ಮೇಯರ್ ಮತ್ತು ಆಯುಕ್ತರಿಗೆ ಎಚ್ಚರಿಕೆಯನ್ನು ನೀಡಿ ತಕ್ಷಣವೇ ತಮ್ಮ ಸೇವೆ ಮುಂದುವರಿಸಬೇಕೆಂದು ಆಗ್ರಹಿಸಿದ್ದಾರೆ.