ಬೆಂಗಳೂರು, ಗುರುವಾರ, 23 ಸೆಪ್ಟೆಂಬರ್ 2010( 20:13 IST )
ಅಲಹಾಬಾದ್‌ನ ಲಕ್ನೋ ಹೈಕೋರ್ಟ್ ಪೀಠ ನಾಳೆ (ಸೆ.24) ಅಯೋಧ್ಯೆ ತೀರ್ಪಿಗೆ ಸುಪ್ರೀಂಕೋರ್ಟ್ ಬುಧವಾರ ಮಧ್ಯಂತರ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಲಾ-ಕಾಲೇಜಿಗೆ ಘೋಷಿಸಿರುವ ಎರಡು ದಿನಗಳ ರಜೆಯನ್ನು ರದ್ದುಪಡಿಸಿದೆ.
ಇಡೀ ದೇಶದ ಜನರೇ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಅಯೋಧ್ಯೆ ತೀರ್ಪಿಗೆ ಸುಪ್ರೀಂಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಕಾಮನ್‌ವೆಲ್ತ್ ಕ್ರೀಡಾಕೂಟದ ಹಿನ್ನೆಲೆಯಲ್ಲಿ ಲಕ್ನೋ ಹೈಕೋರ್ಟ್ ಪೀಠ ನೀಡಲು ಉದ್ದೇಶಿಸಿದ್ದ ಅಯೋಧ್ಯೆ ತೀರ್ಪನ್ನು ಮುಂದೂಡುವಂತೆ ತ್ರಿಪಾಠಿ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೈಅಲರ್ಟ್ ಘೋಷಿಸಿ, ಎರಡು ದಿನಗಳ ಕಾಲ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಅಷ್ಟೇ ಅಲ್ಲ ಮುಂಜಾಗ್ರತಾ ಕ್ರಮವಾಗಿ ಮದ್ಯಮಾರಾಟ ನಿಷೇಧ, ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗಿತ್ತು. ಆದರೆ ತೀರ್ಪಿಗೆ ಸುಪ್ರೀಂಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿರುವುದರಿಂದ ಶಾಲಾ-ಕಾಲೇಜಿಗೆ ನೀಡಿರುವ ರಜೆಯನ್ನು ರದ್ದುಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ನಿಷೇಧಾಜ್ಞೆಯನ್ನೂ ವಾಪಸ್ ಪಡೆಯಲಾಗಿದೆ. ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲಿ ಶಾಂತಿ ಸಭೆಯನ್ನು ನಡೆಸಿ ಕೋಮುಸೌಹಾರ್ದತೆ ಕಾಪಾಡುವಂತೆ ಮನವಿ ಮಾಡಲಾಗಿತ್ತು. ಇದೀಗ ತಾತ್ಕಾಲಿಕ ತಡೆಯಾಜ್ಞೆ ನೀಡಲಾಗಿದೆ. ಈ ಬಗ್ಗೆ ತೀರ್ಪು ಹೊರಬಿದ್ದ ಸಂದರ್ಭದಲ್ಲಿಯೂ ಸಾರ್ವಜನಿಕರು ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ನೀಡದಂತೆ ನಡೆದುಕೊಳ್ಳಬೇಕೆಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.