ಬೆಂಗಳೂರು, ಗುರುವಾರ, 23 ಸೆಪ್ಟೆಂಬರ್ 2010( 20:32 IST )
PTI
ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮೇಲಿನ ಆರೋಪ ಪಟ್ಟಿಯನ್ನು ರದ್ದುಪಡಿಸಬೇಕೆಂದು ನಿತ್ಯಾನಂದ ಸ್ವಾಮಿ ಸಲ್ಲಿಸಿದ ಅರ್ಜಿ ವಿಚಾರಣೆ ದಿಢೀರ್ ಎಂದು ಹೊಸ ತಿರುವು ಪಡೆದುಕೊಂಡಿದ್ದು, ನಿತ್ಯಾನಂದನ ರಾಸಲೀಲೆ ಮತ್ತಷ್ಟು ಹೊರಬೀಳತೊಡಗಿದೆ!
'ನಿತ್ಯಾನಂದ ಸ್ವಾಮಿ ಕಳೆದ ನಾಲ್ಕು ವರ್ಷಗಳಿಂದ ಧರ್ಮದ ಹೆಸರಿನಲ್ಲಿ ಲೈಂಗಿಕ ದೌರ್ಜನ್ಯ ನಡೆಸಿ ಮೋಸ ಮಾಡಿರುವುದಾಗಿ' ಮಹಿಳೆಯೊಬ್ಬರು ಆರೋಪಿಸಿರುವ ಹೇಳಿಕೆಯ ಪ್ರಮಾಣಪತ್ರ, ಸಿ.ಡಿ., ಮಹತ್ವದ ದಾಖಲೆಗಳನ್ನು ಬುಧವಾರ ಸಿಐಡಿ ಅಧಿಕಾರಿಗಳು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.
2005ರಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಸಿ.ಡಿ, ಮತ್ತು ಹೇಳಿಕೆಗಳನ್ನು ದಾಖಲಿಸಿ ಮೊಹರು ಮಾಡಿದ ಲಕೋಟೆಯಲ್ಲಿ ಇಂದು ಹೈಕೋರ್ಟ್‌ಗೆ ಸಲ್ಲಿಸಿರುವುದು ಪ್ರಕರಣ ಮತ್ತಷ್ಟು ತಿರುವು ಪಡೆದುಕೊಳ್ಳತೊಡಗಿದೆ. ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಹೇಳಿಕೆ ಪಡೆದಿದ್ದೇವೆ. ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಹೆಸರು ಬಹಿರಂಗಪಡಿಸುವುದಿಲ್ಲ. ಅದಕ್ಕಾಗಿ ಶೀಲ್ಡ್ ಕವರ್‌ನಲ್ಲಿ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.
ಸಾಕ್ಷಿಗಳಿಗೆ ಪ್ರಾಣ ಬೆದರಿಕೆ ಇರುವುದರಿಂದ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಸಿಐಡಿ ಅಧಿಕಾರಿಗಳು ನ್ಯಾಯಾಧೀಶ ಅರಳಿ ನಾಗರಾಜ್ ಅವರ ಏಕಸದಸ್ಯ ಪೀಠದ ವಿಚಾರಣೆ ವೇಳೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿರುವ ನಿತ್ಯ ವಿಮಲಾನಂದ ಅವರು ಇ-ಮೇಲ್ ಮೂಲಕ ಹೇಳಿಕೆ ನೀಡಿ ತಮ್ಮ ಮೇಲೂ ಅತ್ಯಾಚಾರ ನಡೆದಿದೆ ಎಂದಿದ್ದಾರೆ. ಈ ಸಂಬಂಧ ಇನ್ನೂ ವಿಚಾರಣೆ ನಡೆಸುವ ಅಗತ್ಯವಿದೆ ಎಂದರು. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಸೆ.29ಕ್ಕೆ ಮುಂದೂಡಿದೆ.
ಒಟ್ಟಾರೆ ದೇಶಾದ್ಯಂತ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ನಿತ್ಯಾನಂದನ ರಾಸಲೀಲೆ ಪ್ರಕರಣ ಇದೀಗ ಮತ್ತಷ್ಟು ರಾಡಿಯಾಗತೊಡಗಿದೆ. ಸಿಐಡಿ ಪೊಲೀಸರು ಸಲ್ಲಿಸಿರುವ ಸಿ.ಡಿಯಲ್ಲಿ ನಿತ್ಯಾನಂದನ ಮತ್ತಷ್ಟು ರಾಸಲೀಲೆ ಪುರಾಣಗಳ ಬಗ್ಗೆ ಮಾಹಿತಿ ನೀಡಿದ್ದಾರೆನ್ನಲಾಗಿದೆ.