ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕೆಐಎಡಿಬಿ ಹಗರಣ; ಮತ್ತೊಂದು ಸಚಿವರ ಮೇಲೆ ತೂಗುಗತ್ತಿ (KIADB | Karnataka | BJP govt | Lokayukta)
Bookmark and Share Feedback Print
 
ಕರ್ನಾಟಕದ ಬಿಜೆಪಿ ಸರಕಾರದ ಸಂಕಟಗಳು ಮುಗಿಯುವ ಯಾವುದೇ ಲಕ್ಷಣಗಳು ಕಾಣ ಸಿಗುತ್ತಿಲ್ಲ. ವಿವಾದಗಳ ಕಾರಣದಿಂದಲೇ ಹತ್ತರಷ್ಟು ಸಚಿವರು ತಮ್ಮ ಪದವಿಗಳನ್ನು ಕಳೆದುಕೊಂಡ ಬೆನ್ನಿಗೆ ಇದೀಗ ಮತ್ತೊಬ್ಬ ಸಚಿವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಎಡಿಬಿ) ನಡೆದಿರುವ ನೂರಾರು ಕೋಟಿ ರೂಪಾಯಿ ಹಗರಣದಲ್ಲಿ ಬಿಜೆಪಿ ಸರಕಾರದ ಪ್ರಭಾವಿ ಸಚಿವರೊಬ್ಬರ ಪುತ್ರನ ಕೈವಾಡವಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ದೇವನಹಳ್ಳಿ ತಾಲೂಕಿನ ಜಾಲ ಹೋಬಳಿಯಲ್ಲಿ ಏರೋಸ್ಪೇಸ್ ಕೈಗಾರಿಕಾ ವಲಯ, ಹಾರ್ಡ್‌ವೇರ್ ಮತ್ತು ಮಾಹಿತಿ ತಂತ್ರಜ್ಞಾನ ಪಾರ್ಕ್ ಸ್ಥಾಪನೆಗೆಂದು ಹಲವು ವರ್ಷಗಳ ಹಿಂದೆಯೇ ಕೆಐಎಡಿಬಿ 3,268.10 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು.

ಇದರಲ್ಲಿ 1,648.28 ಎಕರೆ ಸರಕಾರಿ ಮತ್ತು 1,507.20 ಎಕರೆ ಖಾಸಗಿ ಭೂಮಿಯನ್ನು ಮೂರು ಕೈಗಾರಿಕಾ ವಲಯಗಳ ಅಭಿವೃದ್ಧಿಗಾಗಿ ವಶಪಡಿಸಿಕೊಳ್ಳಲಾಗಿತ್ತು.

ಈ ಸಂಬಂಧ 2005ರಿಂದಲೇ ಪರಿಹಾರ ವಿತರಣೆ ಆರಂಭಿಸಲಾಗಿತ್ತು. ಈಗ ಲೋಕಾಯುಕ್ತ ಪೊಲೀಸರು ಹೇಳುತ್ತಿರುವ ಪ್ರಕಾರ ಇಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ನಡೆದಿರುವ ಸಾಧ್ಯತೆಗಳಿವೆ ಎಂದು 'ಪ್ರಜಾವಾಣಿ' ವರದಿ ಮಾಡಿದೆ.

ಇಷ್ಟರವರೆಗೆ ನಡೆಸಿದ ತನಿಖೆಯಲ್ಲಿ 106.89 ಕೋಟಿ ರೂಪಾಯಿಗಳ ಅಕ್ರಮ ಬೆಳಕಿಗೆ ಬಂದಿದೆ. ಇದರಲ್ಲಿ ಆಡಳಿತಾರೂಢ ಪಕ್ಷದ ಸಚಿವರೊಬ್ಬರ ಪುತ್ರ ಮಹತ್ವದ ಪಾತ್ರವಹಿಸಿದ್ದಾನೆ ಎಂದು ಹೇಳಲಾಗಿದೆ.

ಆದರೆ ಆ ಸಚಿವರು ಯಾರು ಮತ್ತು ಸಚಿವನ ಪುತ್ರನ ಹೆಸರೇನು ಎಂಬುದನ್ನು ಲೋಕಾಯುಕ್ತ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ ಸಚಿವರ ಪುತ್ರನೂ ಜನಪ್ರತಿನಿಧಿ.

ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿಯೂ ಸಚಿವರಾಗಿದ್ದು, ಪ್ರಸಕ್ತ ಪ್ರಭಾವಿ ಸಚಿವರಾಗಿರುವವರ ಪುತ್ರ ಹಗರಣದಲ್ಲಿ ನೇರ ಭಾಗಿಯಾಗಿದ್ದಾನೆ. ಆತನಿಂದ ಸುಮಾರು ನಾಲ್ಕು ಕೋಟಿ ರೂಪಾಯಿಗಳಿಗೂ ಹೆಚ್ಚು ನಷ್ಟ ಸರಕಾರಕ್ಕೆ ಆಗಿದೆ. ನಕಲಿ ದಾಖಲೆಗಳನ್ನು ನೀಡಿ ಪರಿಹಾರ ಪಡೆದುಕೊಳ್ಳುವಲ್ಲಿ ಆತ ಯಶಸ್ವಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಚಿವರ ಆಪ್ತನೊಬ್ಬನೂ ಹಗರಣದಲ್ಲಿ ಭಾಗಿಯಾಗಿದ್ದಾನೆ. ಈತ 1.24 ಕೋಟಿ ರೂಪಾಯಿಗಳ ಅಕ್ರಮ ಎಸಗಿದ್ದಾನೆ. ಉಳಿದಂತೆ ಇತರ ಹಲವು ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಕೆಐಎಡಿಬಿ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿಗಳ ಪರಿಹಾರವನ್ನು ಅಡ್ಡದಾರಿಯ ಮೂಲಕ ಪಡೆದುಕೊಂಡಿರುವ ಸಾಧ್ಯತೆಗಳಿವೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಹೇಳಿಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ