ಬೆಂಗಳೂರು, ಶುಕ್ರವಾರ, 24 ಸೆಪ್ಟೆಂಬರ್ 2010( 12:19 IST )
ರಾಯಚೂರು ಜಿಲ್ಲೆಯ ಲಿಂಗಸುಗೂರು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಅವರ ಸಹೋದರ ಕರಿಯಪ್ಪ ಎಂಬಾತ ತನ್ನ ಬೆಂಬಲಿಗರೊಂದಿಗೆ ಏಕಾಏಕಿ ಮನೆಯೊಂದಕ್ಕೆ ನುಗ್ಗಿ ಗೂಂಡಾಗಿರಿ ಪ್ರದರ್ಶಿಸಿದ ಘಟನೆ ವರದಿಯಾಗಿದೆ.
ಶಾಸಕ ಮಾನಪ್ಪ ಅವರ ಸಹೋದರ ಕರಿಯಪ್ಪ ತನ್ನ ಚೇಲಾಗಳೊಂದಿಗೆ ಗುಲ್ಬರ್ಗಾ ಜಿಲ್ಲೆಯ ಸುರಪುರದ ಚೆನ್ನೂರು ಗ್ರಾಮದಲ್ಲಿನ ಮುಸ್ಲಿಂ ಕುಟುಂಬವೊಂದರ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡಿರುವ ಕುಟುಂಬದ ಮೂವರು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಈ ಘಟನೆಯ ಹಿಂದಿನ ಕಾರಣ ಇದುವರೆಗೆ ತಿಳಿದು ಬಂದಿಲ್ಲ. ಆದರೆ ಹಲ್ಲೆಗೊಳಗಾಗಿರುವ ಕುಟುಂಬ ನೀಡಿರುವ ಮಾಹಿತಿ ಪ್ರಕಾರ, ವಿನಾ ಕಾರಣ ರಾತೋರಾತ್ರಿ ಮನೆಗೆ ದಾಳಿ ನಡೆಸಲಾಗಿದೆ.
ಕೂಲಿನಾಲಿ ಮಾಡಿಕೊಂಡಿರುವ ರಸೂಲ್ಸಾಬ್ ಕುಟುಂಬದ ಆರು ಸದಸ್ಯರ ಮೇಲೆ ಹಲ್ಲೆ ನಡೆದಿತ್ತು. ಅವರಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಕೆಲವರು ದೃಷ್ಟಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇನ್ನು ಕೆಲವರ ಬೆನ್ನು ಮತ್ತಿತರೆಡೆ ಚರ್ಮವೇ ಸುಲಿದು ಹೋಗಿದೆ.
ಹಿಗ್ಗಾಮುಗ್ಗಾ ಥಳಿತಕ್ಕೊಳಗಾಗಿರುವ ರಸೂಲ್ಸಾಬ್ ಕುಟುಂಬದ ಎಲ್ಲಾ ಸದಸ್ಯರು ಗುಲ್ಬರ್ಗಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ತನಿಖೆ ನಡೆಸಿದ ನಂತರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.