ಉತ್ತರಾಖಂಡದಲ್ಲಿ ಸಿಲುಕಿರುವ ಕನ್ನಡಿಗರು; ಸ್ಪಂದಿಸದ ಸರ್ಕಾರ
ಬೆಂಗಳೂರು, ಶುಕ್ರವಾರ, 24 ಸೆಪ್ಟೆಂಬರ್ 2010( 13:40 IST )
ಉತ್ತರ ಭಾರತ ಪ್ರವಾಸದಲ್ಲಿರುವ 100ಕ್ಕೂ ಹೆಚ್ಚು ಕನ್ನಡಿಗರು ಉತ್ತರಾಖಂಡದಲ್ಲಿನ ಕುಂಭದ್ರೋಣ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಮತ್ತು ಭೂಕುಸಿತಗಳಿಂದಾಗಿ ಕಳೆದ ಹಲವು ದಿನಗಳಿಂದ ಒಂದೇ ಸ್ಥಳದಲ್ಲಿ ಸಿಲುಕಿದ್ದಾರೆ. ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿದರೂ ಕರ್ನಾಟಕ ಸರಕಾರ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಪ್ರವಾಸಿಗರು ಆರೋಪಿಸಿದ್ದಾರೆ.
ಉತ್ತರಾಖಂಡ್‌ನಲ್ಲಿ ವರುಣನ ರುದ್ರನರ್ತನದಿಂದ ಈ ಪರಿಸ್ಥಿತಿ ಒದಗಿದೆ. ನಾವೆಲ್ಲರೂ ಚಾರ್‌ಧಾಮ್ ಸಮೀಪ ಸಿಕ್ಕಿ ಬಿದ್ದಿದ್ದೇವೆ. ಕಳೆದ ಎಂಟು ದಿನಗಳಿಂದ ಒಂದೇ ಸ್ಥಳದಲ್ಲಿದ್ದೇವೆ. ಇಲ್ಲಿಂದ ಹೋಗುವ ರಸ್ತೆಗಳೆಲ್ಲವೂ ಮುಚ್ಚಿ ಹೋಗಿವೆ. ನಮಗಿರುವ ಹಾದಿಯೆಂದರೆ ಜಲ ಮಾರ್ಗ ಮಾತ್ರ. ಅದಕ್ಕಾಗಿ ಎರಡು ದೋಣಿಗಳನ್ನು ಕಳುಹಿಸಿಕೊಡಿ ಎಂದು ನಾವು ಕರ್ನಾಟಕ ಸರಕಾರದಲ್ಲಿ ಮನವಿ ಮಾಡುತ್ತಿದ್ದೇವೆ ಎಂದು ಕರ್ನಾಟಕದಿಂದ ಹೊರಟಿರುವ ಪ್ರವಾಸಿ ತಂಡದ ಸದಸ್ಯರೊಲ್ಲಬ್ಬರಾದ ನಾಗರತ್ನಮ್ಮ ಎಂಬವವರು ಮನವಿ ಮಾಡಿದ್ದಾರೆ.
ಸುದ್ದಿವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ಅವರು, ನಮ್ಮಲ್ಲಿದ್ದ ಆಹಾರ ಪದಾರ್ಥಗಳೆಲ್ಲವೂ ಮುಗಿದು ಹೋಗಿದೆ. ಇಲ್ಲಿ ವಿದ್ಯುತ್ ಅಥವಾ ದೂರವಾಣಿ ವ್ಯವಸ್ಥೆಗಳೂ ಇಲ್ಲ. ನಾವು ಮೊಬೈಲ್ ಮೂಲಕ ಮಾತನಾಡುವುದು ಕೂಡ ಇಲ್ಲಿಂದ ದುಸ್ತರವಾಗಿದೆ. ದಯವಿಟ್ಟು ಕರ್ನಾಟಕ ಸರಕಾರ ಮುಂದೆ ಬಂದು ನಮ್ಮನ್ನು ರಕ್ಷಿಸಲಿ ಎಂದು ಗೋಗರೆದರು.
ಬೆಂಗಳೂರಿನಿಂದ ದೆಹಲಿಗೆ ರೈಲಿನಲ್ಲಿ ಹೋಗಿ ಹರಿದ್ವಾರಕ್ಕೆ ತಲುಪಿ ಅಲ್ಲಿಂದ ನಾಲ್ಕು ಬಸ್ಸುಗಳ ಮೂಲಕ ಉತ್ತರಾಖಂಡದ ಪ್ರವಾಸಿ ತಾಣಗಳು ಮತ್ತು ಯಾತ್ರಾ ಸ್ಥಳಗಳಿಗೆ ಸುಮಾರು 100ರಷ್ಟು ಕನ್ನಡಿಗರು ಪ್ರಯಾಣಿಸಿದ್ದರು.
ಇದ್ದಕ್ಕಿದ್ದಂತೆ ಮಳೆ ಮತ್ತು ಪ್ರವಾಹ ಸ್ಥಿತಿ ಉಂಟಾದ ಕಾರಣ ಅಪಾರ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿತ್ತು. ಇದರಿಂದಾಗಿ ರಸ್ತೆ ಸಂಚಾರಗಳು ಅಸ್ತವ್ಯಸ್ತಗೊಂಡವು. ಹಾಗಾಗಿ ಯಾರೊಬ್ಬರಿಗೂ ಅಲ್ಲಿಂದ ಹೊರ ಜಗತ್ತಿಗೆ ಮರಳಲು ಸಾಧ್ಯವಾಗುತ್ತಿಲ್ಲ.
ನಮಗೆ ಇಲ್ಲಿಂದ ಬಸ್ಸಿನಲ್ಲಿ ಹೋಗುವುದು ಸದ್ಯಕ್ಕಂತೂ ಸಾಧ್ಯವಿಲ್ಲದ ಮಾತು. ಇಲ್ಲಿಂದ ಎರಡು ದೊಡ್ಡ ದೋಣಿಗಳ ತುರ್ತು ವ್ಯವಸ್ಥೆಯನ್ನು ಕರ್ನಾಟಕ ಸರಕಾರ ಮಾಡಿದಲ್ಲಿ ನಾವು ಡೆಹ್ರಾಡೂನ್‌ಗೆ ತಲುಪಬಹುದು. ಹಾಗಾದಲ್ಲಿ ನಾವು ಸುರಕ್ಷಿತವಾಗಿ ಕರ್ನಾಟಕಕ್ಕೆ ಮರಳಬಹುದು. ದಯವಿಟ್ಟು ಕಾರ್ಯಪ್ರವೃತ್ತರಾಗಿ ಎಂದು ಪ್ರವಾಸಿಗರು ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕದ ಪ್ರವಾಸಿಗರನ್ನು ರಕ್ಷಿಸುವ ಸಲುವಾಗಿ ಸರಕಾರವು ಈಗಾಗಲೇ ಕಾರ್ಯ ಪ್ರವೃತ್ತವಾಗಿದೆ ಎಂದು ಸರಕಾರಿ ಮೂಲಗಳು ಹೇಳುತ್ತಿದ್ದರೂ, ಇದುವರೆಗೂ ಪ್ರವಾಸಿಗರನ್ನು ಸಂಪರ್ಕಿಸುವ ಯಾವುದೇ ಯತ್ನಗಳು ನಡೆದಿಲ್ಲ ಎಂದು ವರದಿಗಳು ಹೇಳಿವೆ.