ವಿಚಾರವಾದಿಗಳು ಮನುಷ್ಯರೇ ಅಲ್ಲ, ಅವರು ಕೇವಲ ನಾಟಕಕಾರರು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಜರಿದಿದ್ದಾರೆ.
ನಗರದ ಕೃಷ್ಣ ಧಾಮದಲ್ಲಿ ನಡೆಯುತ್ತಿದ್ದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಚಾತುರ್ಮಾಸ್ಯದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಹಿಂದೂಗಳು ಒಂದು' ಎನ್ನುವ ಪರಿಕಲ್ಪನೆಯೊಂದಿಗೆ ಕೆಲಸ ಮಾಡುತ್ತಿರುವ ಪೇಜಾವರ ಶ್ರೀಗಳು ಮಾಡುವ ಕೆಲಸವನ್ನು ಗುರುತಿಸದೇ ಪ್ರಗತಿಪರರು ಟೀಕೆ ಮಾಡುತ್ತಾರೆ. ಯಾವುದೇ ವಿಚಾರವಾಗಿ ಮಾತನಾಡದೇ ಇದ್ದರೆ ಅವರಿಗೆ ತಿಂದ ಅನ್ನವೇ ಅರಗುವುದಿಲ್ಲ ಕಟುವಾಗಿ ಟೀಕಿಸಿದರು.
ಈಗ ಸಾಮಾಜಿಕ ನ್ಯಾಯ ಎನ್ನುವುದು ಬರೀ ಭಾಷಣವಾಗಿದೆ. ಆದರೆ ನಡೆದಾಡುವ ದೇವರು ಎಂದೇ ಕರೆಯಿಸಿಕೊಳ್ಳುವ ಪೇಜಾವರ ಶ್ರೀಗಳು, ನಿಜ ಜೀವನದಲ್ಲಿ ಅದನ್ನು ಜಾರಿಗೆ ತರಲು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ಇದನ್ನು ಪ್ರಗತಿಪರರು ಟೀಕಿಸುತ್ತಾರೆ. ಭಾರತೀಯ ಸಂಸ್ಕ್ಕತಿಗೆ ಸಹಸ್ರ ವರ್ಷಗಳ ಇತಿಹಾಸವಿದೆ. ಇದನ್ನು ಎಲ್ಲರೂ ಅರಿಯಬೇಕು ಎಂದು ಹೇಳಿದರು.
ಉಡುಪಿಯಲ್ಲಿ ಕನಕನಿಗೆ ಕೃಷ್ಣ ದರ್ಶನವನ್ನೇ ನೀಡಲಿಲ್ಲ. ಕೆಲವರು ಇದಕ್ಕೆ ಅವಕಾಶವನ್ನೂ ಕೊಡಲಿಲ್ಲ ಎಂದು ಕೆಲ ಅತೃಪ್ತ ಮನಸುಗಳು ಹೇಳುತ್ತಲೇ ಇರುತ್ತವೆ. ಸಮಾಜದಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ಹೇಳುತ್ತಾರೆ. ಇಂಥವರಿಗೆ ದಲಿತರು ಹಾಗೂ ಹಿಂದುಳಿದ ವರ್ಗಗಳವರ ಸ್ಥಿತಿಗತಿ ಗೊತ್ತಾಗುವುದೇ ಇಲ್ಲ. ಇಂಥ ಸಂದರ್ಭದಲ್ಲಿ ಮಾದಾರ ಸ್ವಾಮೀಜಿಯನ್ನು ಅಪ್ಪಿಕೊಳ್ಳುವ ಮೂಲಕ ಈ ಅಪಚಾರವನ್ನು ನಿರ್ನಾಮ ಮಾಡಿದ್ದಾರೆ ಎಂದು ಹೇಳಿದರು.
ಈಗ ಹಿಂದೂ ಸಮಾಜ ಛಿದ್ರವಾಗಿದೆ. ರಾಜಕಾರಣಿಗಳೇ ಬಿತ್ತನೆ ಬೀಜ ಬಿತ್ತಿ ಸಮಾಜವನ್ನು ಒಡೆಯುತ್ತಿದ್ದಾರೆ. ಇಂಥ ದುಸ್ಥಿತಿಗೆ ಸಮಾಜವೇ ಉತ್ತರ ನೀಡಬೇಕು ಎಂದು ನುಡಿದರು.