ಬೆಂಗಳೂರು, ಶುಕ್ರವಾರ, 24 ಸೆಪ್ಟೆಂಬರ್ 2010( 16:38 IST )
ಓಟದಲ್ಲಾದರೆ ಎಲ್ಲರನ್ನೂ ಹಿಂದಿಕ್ಕಿ ಮುಂದೆ ಬಂದವರಿಗೆ ಪದಕ ಕೊಡಲಾಗುತ್ತದೆ. ಆದರೆ ರಾಜಕಾರಣದಲ್ಲಿ ನನ್ನ ವೇಗವೇ ಮುಳುವಾಗಿದೆ. ಅಧಿಕಾರ ರಾಜಕಾರಣದ ಪಿತೂರಿಗೆ ನಾನು ಬಲಿಯಾಗಿದ್ದೇನೆ. ಆದರೂ ನಾನು ನಂಬಿರುವ ಸಿದ್ಧಾಂತ, ಪಕ್ಷನಿಷ್ಠೆ ಮತ್ತು ಹಿಂದುತ್ವಕ್ಕಾಗಿನ ಹೋರಾಟವನ್ನು ಕೈ ಬಿಡುವುದಿಲ್ಲ ಎಂದು ಸಚಿವ ಸ್ಥಾನ ವಂಚಿತ ಬಿಜೆಪಿ ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಿದ್ದ ಅವರು, ನಮ್ಮ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗಿಂತ, ನಾಯಕರಿಗಿಂತ ಪಕ್ಷಾಂತರಿಗಳಿಗೆ ಮತ್ತು ಪಕ್ಷೇತರರಿಗೆ ಆದ್ಯತೆ ನೀಡಲಾಗುತ್ತಿದೆ ಎಂಬ ಸತ್ಯದ ಅರಿವು ನನಗಾಗಿದೆ. ಪಕ್ಷಾಂತರಿಗಳನ್ನು ಅಧಿಕಾರ ಹುಡುಕಿಕೊಂಡು ಹೋಗಿದೆ ಎಂದರು.
ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುವ ನಿಟ್ಟಿನಲ್ಲ ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯ ಕುರಿತು ಮಾತನಾಡಿದ ರವಿ, ಈ ಕುರಿತು ನಿರ್ಧಾರ ಮಾಡಬೇಕಾಗಿರುವುದು ಪಕ್ಷದ ಅಧ್ಯಕ್ಷರಾದ ಕೆ.ಎಸ್. ಈಶ್ವರಪ್ಪನವರು. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದು ನುಡಿದರು.
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿ ಪ್ರಭಾವಿಯಾಗಿ ಮೂಡಿ ಬಂದಿರುವುದನ್ನು ಪರಿಗಣಿಸಿ ಜಿಲ್ಲೆಗೆ ಸಂಪುಟದಲ್ಲಿ ಸ್ಥಾನ ನೀಡಬೇಕಿತ್ತು. ಜಿಲ್ಲೆಗೆ ಆದ್ಯತೆ ಕೊಡಿ ಎಂದು ನಾನು ಕೇಳಿದ್ದೆಯೇ ಹೊರತು ನನಗೆ ಸಚಿವ ಸ್ಥಾನ ನೀಡಿ ಎಂದಿರಲಿಲ್ಲ. ಆದರೆ ಮುಖ್ಯಮಂತ್ರಿಯವರಾಗಲಿ, ಪಕ್ಷದ ಅಧ್ಯಕ್ಷರಾಗಲಿ ನನ್ನ ಮನವಿಗೆ ಓಗೊಟ್ಟಿಲ್ಲ ಎಂದರು.
ಮುಂದಿನ ಹೆಜ್ಜೆಯ ಬಗ್ಗೆ ಕುತೂಹೂಲದ ಪ್ರಶ್ನೆಗಳು ಹಾರಿ ಬಂದಾಗ ತಾಳ್ಮೆಯಿಂದಲೇ ಉತ್ತರಿಸಿದ ರವಿ, ನನ್ನ ಹೋರಾಟದ ಹಾದಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ನಾನು ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡಿಕೊಂಡು ಬಂದವನು. ನಮ್ಮಲ್ಲಿ ಒಡಕು ಸೃಷ್ಟಿಸುವ ಕೆಲವನ್ನು ಮಾಡಿರುವುದು ದೊಡ್ಡವರು. ಅವರು ಯಾರೆಂದು ಹೇಳಲು ನಾನೀಗ ಹೋಗುತ್ತಿಲ್ಲ. ಆದರೆ ನಾನು ಹತಾಶನಾಗಿಲ್ಲ ಎಂದು ತಿಳಿಸಿದರು.
ರಾಜಕೀಯ ಬದುಕು ಮುಕ್ತಾಯಗೊಂಡಿದೆ ಎಂಬ ರೀತಿಯ ಭ್ರಮನಿರಶನ ನನಗಾಗಿಲ್ಲ. ಆದರೆ ಪಕ್ಷನಿಷ್ಠೆ ಮತ್ತು ಪರಿಶ್ರಮಕ್ಕೆ ಪ್ರತಿಫಲ ದೊರಕಿಲ್ಲ ಎಂಬ ನೋವಿದೆ. ನಂಬಿದ ಕ್ಷೇತ್ರದ ಜನತೆ ಮತ್ತು ಸಿದ್ಧಾಂತಕ್ಕಾಗಿ ಕೊನೆಯ ಉಸಿರಿನವರೆಗೂ ಹೋರಾಡುತ್ತೇನೆ. ಹಿಂದುತ್ವ ಮತ್ತು ಅದಕ್ಕೆ ಪೂರಕವಾದ ಹೋರಾಟದಿಂದ ಹಿಂದಕ್ಕೆ ಸರಿಯಲಾರೆ ಎಂದರು.
ರಾಜೀನಾಮೆ ವಾಪಸ್: ಅಪ್ಪಚ್ಚು ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಪಕ್ಷದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ರಾಜೀನಾಮೆ ಸಲ್ಲಿಸಿದ್ದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಇದೀಗ ರಾಜೀನಾಮೆಯನ್ನು ವಾಪಸ್ ಪಡೆದುಕೊಂಡಿದ್ದಾರೆ.
ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ನನಗೆ ಭರವಸೆ ನೀಡಿದ್ದರು. ಅದು ಈಡೇರದೇ ಇರುವುದರಿಂದ ನೋವಾಗಿ ರಾಜೀನಾಮೆ ನೀಡಿದ್ದೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನದ ಭರವಸೆ ನನಗೆ ದೊರೆತಿದೆ. ಹಾಗಾಗಿ ರಾಜೀನಾಮೆಯನ್ನು ವಾಪಸ್ ಪಡೆಯುತ್ತಿದ್ದೇನೆ ಎಂದು ರಂಜನ್ ತಿಳಿಸಿದ್ದಾರೆ.