ಅದಿರು ರಫ್ತು ನಿಷೇಧ ಅಧಿಕಾರ ರಾಜ್ಯ ಸರಕಾರಕ್ಕೆ ಇಲ್ಲ ಎಂದಾದ ಮೇಲೆ ರಾಜ್ಯ ಸರಕಾರದ ವಿರುದ್ಧ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತಿರುವುದೇಕೆ? ಹಾಗಾದರೆ ಕೇಂದ್ರದ ನಿಲುವು ಏನು? ಎಂದು ಮುಖ್ಯ ನ್ಯಾ.ಜೆ.ಎಚ್.ಖೇಹರ್ ಮತ್ತು ನ್ಯಾ.ಅಬ್ದುಲ್ ನಜೀರ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯ ಸರಕಾರ ತನ್ನ ಅಧಿಕಾರ ವ್ಯಾಪ್ತಿ ಮೀರಿ ಅದಿರು ರಫ್ತು ನಿಷೇಧಿಸಿದೆ ಎಂದಾದರೆ ಅದರ ವಿರುದ್ಧ ಕ್ರಮ ಕೈಗೊಂಡಿಲ್ಲ ಯಾಕೆ? ಎಂದು ಕೇಂದ್ರ ಸರಕಾರದ ಪರ ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ಅವರನ್ನು ಪ್ರಶ್ನಿಸಿದ ನ್ಯಾಯಪೀಠ, ಈ ಬಗ್ಗೆ ಸರಕಾರದಿಂದ ಮಾಹಿತಿ ಪಡೆದು ವಿವರಣೆ ನೀಡುವಂತೆ ನಿರ್ದೇಶಿಸಿ ವಿಚಾರಣೆಯನ್ನು ಅಕ್ಟೋಬರ್ 1ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ ಅದಿರು ರಫ್ತು ನಿಷೇಧಿಸಿ ಸರಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ವಿ.ಎಸ್.ಲಾಡ್ ಕಂಪನಿ ಪರ ಮಾಜಿ ಅಡ್ವೋಕೇಟ್ ಜನರಲ್ ಉದಯ ಹೊಳ್ಳ ಅವರು ವಾದ ಮಂಡಿಸಿ, ರಾಜ್ಯ ಸರಕಾರಕ್ಕೆ ಅದಿರುವ ಸಂರಕ್ಷಿಸುವ ಉದ್ದೇಶ ಇಲ್ಲ ಎಂದು ಹೇಳಿದರು.
ಅಕ್ರಮ ಅದಿರು ರಫ್ತು ತಡೆಗಟ್ಟಲು ಅದಿರು ರಫ್ತು ನಿಷೇಧಿಸಲಾಗಿದೆ ಎಂಬ ಸರಕಾರದ ವಾದದಲ್ಲಿ ಅರ್ಥವಿಲ್ಲ. ಅದಿರು ರಫ್ತು ನಿಷೇಧಿಸಿ ರಫ್ತನ್ನು ತಡೆಗಟ್ಟಿದರೆ ಅದರಲ್ಲಿ ಅಕ್ರಮ ನಡೆಯುತ್ತದೆ ಎಂದು ಪತ್ತೆಹಚ್ಚಲು ಸಾಧ್ಯವೇ ಎಂದು ಉದಯ ಹೊಳ್ಳ ಪ್ರಶ್ನಿಸಿದರು.