ಕಾಂಗ್ರೆಸ್ ನಾಯಕರು ರೋಗದಿಂದ ಬಳಲುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿರುವ ಸಂಸದ ಎಚ್.ವಿಶ್ವನಾಥ್, ಕಾಂಗ್ರೆಸ್ ಮುಖಂಡರು ಕೂಡಲೇ ಮುಕ್ತವಾಗಿ ಚರ್ಚಿಸಿ ತಮ್ಮ ರೋಗಕ್ಕೆ ತಾವೇ ಚಿಕಿತ್ಸೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ನಡೆದಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸತತವಾಗಿ ಸೋಲುತ್ತಿರುವ ಬಗ್ಗೆ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ವಿಶ್ಲೇಷಣೆ ಮಾಡಿದ ಅವರು, ರಾಜ್ಯ ಕಾಂಗ್ರೆಸ್‌ನಲ್ಲಿ ದೋಷಕ್ಕೆ ನಾಯಕರು ದೆಹಲಿ ಕಡೆ ಕೈತೋರಿಸಬಾರದು. ಮೊದಲು ಕಾಂಗ್ರೆಸ್ ನಾಯಕರ ಸಣ್ಣತನ ದೂರವಾಗಬೇಕು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡರೇ ಪಕ್ಷದ ಶಕ್ತಿ ಕಸಿಯುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಆದರೂ ಕಾಂಗ್ರೆಸ್‌ಗೆ ಹೊಸ ಪಯಣ, ಶಕ್ತಿಯ ಅಗತ್ಯವಿದೆ. ಆ ನಿಟ್ಟಿನಲ್ಲಿ ರಾಜ್ಯದ ಕಾಂಗ್ರೆಸ್ ಮುಖಂಡರು ಎಲ್ಲಾ ಅಸಮಾಧಾನ ಬದಿಗಿಟ್ಟು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.