ಡೆಪಾಸಿಟ್ ಪಡೆದು ಕೆಲಸ ಕೊಡಿಸುವುದಾಗಿ ವಂಚಿಸಿ, ಇನ್ನೂ ಕೆಲವರಿಗೆ ಸಂಬಳ ನೀಡದೆ ಸತಾಯಿಸುತ್ತಿದ್ದ ಸಂಪಾದಕನೊಬ್ಬನಿಗೆ ಬೀದಿಯಲ್ಲಿ ಮೆರವಣಿಗೆ ಮಾಡಿ ಥಳಿಸಿದ ಘಟನೆ ಮೈಸೂರಿನ ಕುವೆಂಪು ನಗರದಲ್ಲಿ ಶನಿವಾರ ನಡೆದಿದೆ.
ಘಟನೆ ವಿವರ: ಮೈಸೂರಿನ ತೋಂಟೇಶ್ ವಾರಪತ್ರಿಕೆ ಸಂಪಾದಕ ತೋಂಟೇಶ್ ಅಲಿಯಾಸ್ ತೋಂಟದಾರ್ಯ ಸ್ವಾಮಿ ಕೆಲಸ ಕೊಡಿಸೋ ನೆಪದಲ್ಲಿ 20 ಸಾವಿರದಿಂದ ಒಂದು ಲಕ್ಷ ರೂಪಾಯಿವರೆಗೆ ಡೆಪಾಸಿಟ್ ಪಡೆಯುತ್ತಿದ್ದ. ಹೀಗೆ ಕೆಲಸ ನೀಡಿದವರಿಗೆ ಸರಿಯಾಗಿ ಸಂಬಳ ಕೊಡದೆ ಪತ್ರಿಕೆಯಲ್ಲಿ ದುಡಿಸಿ ಸತಾಯಿಸುತ್ತಿದ್ದ.
ಪತ್ರಿಕೋದ್ಯಮ ವಿದ್ಯಾರ್ಥಿಗಳಲ್ಲಿಯೂ ಹಣ ಡೆಪಾಸಿಟ್ ಪಡೆದು ವರದಿಗಾರಿಕೆ ಕೆಲಸ ಕೊಟ್ಟಿದ್ದ. ಆದರೆ ಕಳೆದ ನಾಲ್ಕೈದು ತಿಂಗಳಿನಿಂದ ಸಂಬಳ ನೀಡದೆ ಸತಾಯಿಸುತ್ತಿದ್ದ. ಸಂಬಳ ಕೇಳಿದ್ರೆ ರಾಜೀನಾಮೆ ಕೊಟ್ಟು ಹೋಗಿ, ಏನ್ ಬೇಕಾದ್ರೂ ಮಾಡಿಕೊಳ್ಳಿ ನಾನು ನೋಡಿಕೊಳ್ತೇನೆ ಅಂತ ಧಮಕಿ ಹಾಕಿದ್ದ ಎಂದು ಮೋಸ ಹೋದ ಶಿವು ಎಂಬವರು ದೂರಿದ್ದಾರೆ.
ಹೀಗೆ ತೋಂಟೇಶ್ ಪತ್ರಿಕೆ ಹೆಸರಿನಲ್ಲಿ ಕೆಲಸ ಕೊಡಿಸುವುದಾಗಿ ಡೆಪಾಸಿಟ್ ಪಡೆದು, ಹಲವರನ್ನು ವಂಚಿಸಿ, ಕೆಲವರಿಗೆ ಸಂಬಳ ನೀಡದೆ ಸತಾಯಿಸುತ್ತಿದ್ದ ತೋಂಟದಾರ್ಯ ಸ್ವಾಮಿ ವಿರುದ್ಧ ಬೇಸತ್ತ ನೌಕರರು ಸಾರ್ವಜನಿಕವಾಗಿಯೇ ಗೂಸಾ ಕೊಟ್ಟಿದ್ದಾರೆ. ತಮ್ಮಿಂದ ಪಡೆದುಕೊಂಡಿರುವ ಡೆಪಾಸಿಟ್ ಅನ್ನು ವಾಪಸ್ ಕೊಡುವಂತೆ ವಂಚಿತ ನೌಕರರು ಒತ್ತಾಯಿಸಿ, ಸಂಪಾದಕನ ವಿರುದ್ಧ ಕುವೆಂಪು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.