ಸುಬ್ರಹ್ಮಣ್ಯ, ಶನಿವಾರ, 25 ಸೆಪ್ಟೆಂಬರ್ 2010( 17:11 IST )
ಪ್ಲ್ಯಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿ ಉಂಟಾಗುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಪ್ಲ್ಯಾಸ್ಟಿಕ್ ಬಳಕೆ ನಿಷೇಧಿಸಲಾಗುವುದು. ಪರಿಸರ ಹಾಗೂ ಮುಜರಾಯಿ ಇಲಾಖೆಯಿಂದ ಕೂಡಲೇ ಈ ಬಗ್ಗೆ ಸುತ್ತೋಲೆ ಹೊರಡಿಸಲಾಗುವುದು ಎಂದು ಪರಿಸರ ಮತ್ತು ಮುಜರಾಯಿ ಸಚಿವ ಕೃಷ್ಣ ಜೆ.ಪಾಲೇಮಾರ್ ತಿಳಿಸಿದ್ದಾರೆ.
ಮುಜರಾಯಿ ಸಚಿವರಾದ ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಮೊದಲ ಭೇಟಿ ನೀಡಿದ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಜರಾಯಿ ದೇವಸ್ಥಾನ ಮಾತ್ರವಲ್ಲದೆ ಖಾಸಗಿ ದೇವಸ್ಥಾನಗಳಿಗೂ ಈ ಬಗ್ಗೆ ಸೂಚನೆ ನೀಡಲಾಗುವುದೆಂದು ತಿಳಿಸಿದರು.
ಕರಾವಳಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಸೇರಿದಂತೆ 'ಎ' ಶ್ರೇಣಿಯ ಹಲವು ದೇವಸ್ಥಾನಗಳಿವೆ. ದೇವಸ್ಥಾನಗಳು ಶ್ರದ್ದಾಕೇಂದ್ರವಾಗಬೇಕೆ ಹೊರತು ವ್ಯಾಪಾರಿ ಕೇಂದ್ರವಾಗಬಾರದು ಎಂದು ಹೇಳಿದ ಪಾಲೆಮಾರ್, ತನಗೆ ದೊರೆತ ಪರಿಸರ ಹಾಗೂ ಮುಜರಾಯಿ ಖಾತೆಗಳು ಒಂದಕ್ಕೊಂದು ಪೂರಕ ಎಂದರು.
ದೇವಸ್ಥಾನಗಳಲ್ಲಿ ವ್ಯಾಪಾರೀಕರಣ ಕಂಡುಬಾರದಂತೆ ಕಾಳಜಿ ವಹಿಸುತ್ತೇನೆ. ಎಲ್ಲ ದೇವಸ್ಥಾನಗಳ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಒತ್ತು ನೀಡುತ್ತೇನೆ. ನಾನು ಪರಿಸರ ಪ್ರೇಮಿಯಾಗಿದ್ದು, ದೈವ, ದೇವರ ಮೇಲೆ ನಂಬಿಕೆ ಇರುವವನು. ದೇವಸ್ಥಾನಗಳ ಪಾವಿತ್ರ್ಯತೆ ಕಾಪಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದರು.