ಸರಕಾರದಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿರುವುದರಿಂದ ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಪತ್ರ ಹಿಂಪಡೆಯಲಾಗುವುದೆಂದು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಘೋಷಿಸಿದ್ದಾರೆ.
ಮೂರನೇ ಬಾರಿಗೆ ಆಯ್ಕೆಯಾದರೂ ಸಚಿವ ಸ್ಥಾನ ನೀಡಲಿಲ್ಲ ಎಂದು ತೀವ್ರ ಮನನೊಂದ ಅಪ್ಪಚ್ಚು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಪತ್ರವನ್ನು ಸ್ಪೀಕರ್ ಆಪ್ತ ಕಾರ್ಯದರ್ಶಿಗೆ ನೀಡಿದ್ದರು. ರಾಜೀನಾಮೆ ಪತ್ರ ಹಿಂಪಡೆಯುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಮನವೊಲಿಸುವ ಪ್ರಯತ್ನ ನಡೆಸಿದ್ದರು.
ಪಕ್ಷಕ್ಕಾಗಿ 30 ವರ್ಷದಿಂದ ಶ್ರಮಿಸಿದ್ದೇನೆ. ತಮ್ಮದೇ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಮಯದಲ್ಲಿ ತನಗೆ ಸಚಿವ ಸ್ಥಾನ ನೀಡದಿರುವುದು ಹಾಗೂ ಕೊಡಗಿಗೆ ಅವಕಾಶ ನೀಡದಿರುವುದು ತುಂಬಾ ಬೇಸರ ಉಂಟು ಮಾಡಿದೆ. ಪಕ್ಷದ ನಿಷ್ಠಾವಂತನಾಗಿ ಮಡಿಕೇರಿ ಕ್ಷೇತ್ರದ ಶಾಸಕನಾಗಿ ಮುಂದುವರಿಯಲು ನಿರ್ಧರಿಸಿದ್ದೇನೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.