ಮೇಲ್ಜಾತಿಯವರಿಗೆ ಸಿಎಂ ಸಂಪುಟದಲ್ಲಿ ಆದ್ಯತೆ :ಉಗ್ರಪ್ಪ ಕಿಡಿ
ಬೆಂಗಳೂರು, ಭಾನುವಾರ, 26 ಸೆಪ್ಟೆಂಬರ್ 2010( 10:42 IST )
ಸಂಪುಟ ವಿಸ್ತರಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಾಮಾಜಿಕ ನ್ಯಾಯವನ್ನು ಗಾಳಿಗೆ ತೂರಿ, ಕೇವಲ ಮೇಲ್ಜಾತಿಯವರಿಗೆ ಪ್ರಾತಿನಿದ್ಯ ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಯಡಿಯೂರಪ್ಪ ಕೇವಲ ಜಾತಿಯನ್ನು ಪರಿಗಣಿಸಿ, ಸಂಪುಟ ರಚಿಸಿದ್ದಾರೆಯೇ ಹೊರತು ಜಿಲ್ಲಾವಾರು ಶೋಷಿತ ವರ್ಗದವರಿಗೆ ಸ್ಥಾನ ನೀಡುವಲ್ಲಿ ವಿಫಲವಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸೆಪ್ಟೆಂಬರ್ 22 ರಂದು ನಡೆದ ಸಂಪುಟ ಪುನರಚನೆಯಲ್ಲಿ ಆರು ಮಂದಿ ಸಚಿವರನ್ನು ಸೇರ್ಪಡೆಗೊಳಿಸಿದ್ದು, ರಾಜ್ಯದ 30 ಜಿಲ್ಲೆಗಳಲ್ಲಿ ಕೇವಲ 18 ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. 12 ಜಿಲ್ಲೆಗಳನ್ನು ಅನಾಥವಾಗಿಸಲಾಗಿದೆ. ಇದರಿಂದ ಪ್ರಾದೇಶಿಕ ಸಮತೋಲನಕ್ಕೆ ಧಕ್ಕೆಯಾಗಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಹಿಂದುಳಿದ ವರ್ಗದವರು (ಶೇ.27ರಷ್ಟು) ಎಸ್.ಸಿ(ಶೇ.17ರಷ್ಟು) ಲಿಂಗಾಯಿತರು ಶೇ.16ರಷ್ಟು , ಮುಸ್ಲಿಂರು (ಶೇ.14ರಷ್ಟು) ಒಕ್ಕಲಿಗರು (ಶೇ.10ರಷ್ಟು) ಕುರುಬ ಜನಾಂಗ (ಶೇ.6.6ರಷ್ಟು) ಮತ್ತು ಬ್ರಾಹ್ಮಣರು(ಶೇ.3.8ರಷ್ಟು)ಜನಸಂಖ್ಯೆಯನ್ನು ಹೊಂದಿದ್ದಾರೆ.
ಸಂಪುಟದ ಪ್ರಮುಖ ಖಾತೆಗಳಾದ ಹಣಕಾಸು, ಭಾರಿ ನೀರಾವರಿ, ಲೋಕೋಪಯೋಗಿ, ಮತ್ತು ಗ್ರಾಮಿಣಾಭಿವೃದ್ಧಿ ಖಾತೆಗಳನ್ನು ಲಿಂಗಾಯಿತ ಸಮುದಾಯದವರಿಗೆ ವಹಿಸಿದ್ದು, ಇತರ ಜಾತಿಗಳನ್ನು ಕಡೆಗೆಣಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಉಗ್ರಪ್ಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.