ಅರಣ್ಯ ಇಲಾಖೆಗೆ ಸಂಬಂಧಪಟ್ಟಂತೆ ಹೊಸ ನೀತಿ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಅರಣ್ಯ ಸಚಿವ ವಿಜಯಶಂಕರ್ ತಿಳಿಸಿದ್ದಾರೆ.
ನಗರದ ಹೊರವಲಯದಲ್ಲಿರುವ ಗೆಂಡೆಕಟ್ಟೆ ಅರಣ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲಾಖೆಗೆ ಹೊಸದಾಗಿ ನೇಮಕ ಸೇರಿದಂತೆ ಸಾಲುಮರಗಳು, ಗುಂಡುತೋಪುಗಳು, ವನಸ್ಪತಿಗಳ ರಕ್ಷಣೆ, ಇಲಾಖೆಗೆ ಸೇರಿದ ಜಾಗಗಳ ರಕ್ಷಣೆ ಸೇರಿದಂತೆ ಇಲಾಖೆಗೆ ಸಂಬಂಧಪಟ್ಟ ಎಲ್ಲ ವಿಷಯಗಳ ಬಗ್ಗೆ ಸಮಗ್ರ ಯೋಜನೆ ಇರುವ ನೀತಿ ರೂಪಿಸಲಾಗುತ್ತದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಪ್ರಾದೇಶಿಕವಾರು ಅರಣ್ಯದ ಬಗ್ಗೆ ಸದ್ಯ ಸ್ಪಷ್ಟ ನೀತಿ ಇಲ್ಲ. ಜತೆಗೆ, ಇಲಾಖೆ ಮುಂದೆ ಸವಾಲುಗಳ ಹೊರೆಯೇ ಇದ್ದು ಎಲ್ಲವನ್ನೂ ಎದುರಿಸಿ, ಬಗೆಹರಿಸುವ ವಿಶ್ವಾಸವಿದೆ. ಕಾಡು ಮತ್ತು ನಾಡಿನ ನಡುವಿನ ಸಂಘರ್ಷದ ಬಗ್ಗೆ ಅರಿವಿದೆ ಎಂದರು.
ಆನೆ ಸೇರಿದಂತೆ ಕಾಡುಪ್ರಾಣಿಗಳ ಹಾವಳಿ, ಬೆಳೆ ಹಾಗೂ ಜೀವಹಾನಿ ಬಗ್ಗೆ ಅರಿವಿದೆ. ಈ ಬಗ್ಗೆ ಶಾಶ್ವತ ಪರಿಹಾರ ರೂಪಿಸುವ ಉದ್ದೇಶವಿದೆ ಎಂದ ಅವರು, ಖಾಸಗಿ ಸಹಭಾಗಿತ್ವದಲ್ಲಿ ಅರಣ್ಯ ಸಂಪನ್ಮೂಲ ಅಭಿವೃದ್ದಿಪಡಿಸಲು ಚಿಂತನೆ ನಡೆಸಲಾಗಿದೆ. ಖಾಸಗಿಯವ ರನ್ನೂ ತೊಡಗಿಸಿಕೊಳ್ಳುವುದರಿಂದ ಸಂಪನ್ಮೂಲಗಳ ಕೊರತೆ ಅಭಿವೃದ್ದಿ ಕೆಲಸಗಳಿಗೆ ಕಾಡಿಸದು ಎಂದರು.
ಇಲಾಖೆಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಚರ್ಚಿಸಲು ಹಿರಿಯ ಆಧಿಕಾರಿಗಳ ಸಭೆ ಕರೆಯಲಾಗಿದೆ. ಇಲ್ಲಿ ಹೊಸ ನೀತಿ ಬಗ್ಗೆ ಸಮಗ್ರವಾಗಿ ಚರ್ಚಿಸಲಿದ್ದು, ಸಭೆ ಬಳಿಕ ಯೋಜನೆಗಳ ಬಗ್ಗೆ ಸಂಪೂರ್ಣ ಚಿತ್ರಣ ಸಿಗಲಿದೆ ಎಂದು ಹೇಳಿದರು.