ಮತ್ತೆ ಸಂಪುಟಕ್ಕೆ ಸರ್ಜರಿ ನಡೆದರೂ ನನ್ನ ಸ್ಥಾನ ಅಬಾಧಿತ: ಸುಧಾಕರ್
ಚಿತ್ರದುರ್ಗ, ಭಾನುವಾರ, 26 ಸೆಪ್ಟೆಂಬರ್ 2010( 16:28 IST )
ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಗಾಂಜಾ, ಮೊಬೈಲ್, ಚಾಕು ಪತ್ತೆಯಾಗಿರುವ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಂದೀಖಾನೆ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ ನಂತರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು. ತುಮಕೂರು ಅಷ್ಟೇ ಅಲ್ಲ, ರಾಜ್ಯದ ನಾನಾ ಜೈಲುಗಳಲ್ಲೂ ಇಂತಹ ಪ್ರಕರಣಗಳು ಕಂಡು ಬರುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲಾ ಬಂದೀಖಾನೆಯ ಗೋಡೆ ಬಿರುಕು ಬಿಟ್ಟಿದೆ. ಏಳು ವರ್ಷದ ಹಿಂದಷ್ಟೇ ಈ ಕಾಮಗಾರಿ ನಡೆದಿದ್ದು ಕಳಪೆಯಾಗಿರುವುದು ದೃಢಪಟ್ಟಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಶೀಘ್ರ ಇಲ್ಲಿನ ಜೈಲ್‌ಗೆ ಆವರಣ ಗೋಡೆ, ಉದ್ಯಾನ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವದು ಎಂದರು.
ಮಂತ್ರಿಸ್ಥಾನಕ್ಕೆ ಯಾವುದೇ ಧಕ್ಕೆ ಇಲ್ಲ. ಮುಂದೆಯೂ ಸಂಪುಟಕ್ಕೆ ಸರ್ಜರಿ ನಡೆದರೆ ನನ್ನ ಸ್ಥಾನ ಅಬಾಧಿತ. ನನಗೆ ಸಿಎಂ ಯಡಿಯೂರಪ್ಪ ಮೇಲೆ ಪೂರ್ಣ ನಂಬಿಕೆಯಿದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಜರಾಯಿ ಖಾತೆಯಿದ್ದರೆ ಸಚಿವ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂಬುದೆಲ್ಲ ಸುಳ್ಳು. ಆ ಖಾತೆ ಕೂಡ ನನಗೆ ಖುಷಿ ಕೊಟ್ಟಿತ್ತು. ಈಗ ಬೇರೆ ಖಾತೆಯ ಜವಾಬ್ದಾರಿ ವಹಿಸಲಾಗಿದ್ದು ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದು ಹೇಳಿದರು.