ಗೃಹ ಸಚಿವರು ಯಾವುದೋ ತಪ್ಪಿಗೆ ತಲೆದಂಡವಾಗಿದ್ದನ್ನು ಕಂಡಿದ್ದೇವೆ. ಗೃಹ ಸಚಿವನಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿ, ಗೌರವಯುತವಾಗಿ ಆ ಖಾತೆಯಿಂದ ನಿರ್ಗಮಿಸಿದ್ದೇನೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್. ಆಚಾರ್ಯ ಹೇಳಿದರು.
ಕೇಂದ್ರದಲ್ಲಿ ಗೃಹ ಸಚಿವರಾಗಿದ್ದ ಶಿವರಾಜ್ ಪಾಟೀಲ್ ತಮ್ಮದಲ್ಲದ ತಪ್ಪಿಗೆ ರಾಜೀನಾಮೆ ಕೊಟ್ಟಿರುವ ವಿಷಯ ನಮ್ಮ ಮುಂದೆ ಇದೆ. ಆದರೆ ನಾವು ಮಾಡಿದ ಸಾಧನೆಯನ್ನು ಮೆಲುಕು ಹಾಕುತ್ತಿರುವಾಗಲೇ ಗೃಹ ಖಾತೆಯಿಂದ ಹೊರಹೋಗುತ್ತಿರುವುದು ತನಗೆ ಹೆಮ್ಮೆಯ ವಿಚಾರ ಎಂದರು.
ಉಡುಪಿ ನಗರಸಭೆಗೆ 30 ಕೋಟಿ ರೂ. ವಿಶೇಷ ಅನುದಾನ ಸಹಿತ ಹಲವು ಅನುದಾನಗಳನ್ನು ಒದಗಿಸಲು ಪ್ರಯತ್ನ ಪಟ್ಟಿದ್ದೇವೆ. ಉಡುಪಿಯ ಅಭಿವೃದ್ದಿಗೆ ನಿಮ್ಮೆಲ್ಲರ ಸಹಕಾರದಲ್ಲಿ ಇನ್ನಷ್ಟು ಕೆಲಸ ಮಾಡುವುದಾಗಿ ತಿಳಿಸಿದರು.
ಅಭಿವೃದ್ದಿ ಎಂಬ ಶಬ್ದಕ್ಕೆ ಮೂಲ ಕಲ್ಪನೆ ನೀಡಿದ್ದು ಉಡುಪಿ. ಈಗ ನಮ್ಮ ಉಡುಪಿಯೂ ಆಗಿದೆ. ರಾಜ್ಯ ಸರಕಾರ ಉಡುಪಿಗೆ ಬಹಳಷ್ಟು ಅನುದಾನ ನೀಡಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಅನುದಾನ ಒದಗಿಸುವ ಭರವಸೆ ನೀಡಿದರು.
ಕಳೆದ ವರ್ಷ ರಾಷ್ಟ್ತ್ರೀಯ ಹೆದ್ದಾರಿಯಲ್ಲಿ ಹೊಂಡಗಳು ನಿರ್ಮಾಣಗೊಂಡಾಗ ಅದರ ದುರಸ್ತಿಗೆ ಕೇಂದ್ರ ಸರಕಾರ ಹಣ ನೀಡದೇ ಇದ್ದರೂ ರಾಜ್ಯ ಸರಕಾರ 2.12 ಕೋಟಿ ರೂ. ಒದಗಿಸಿ ರಸ್ತೆ ದುರಸ್ತಿ ಮಾಡಿಸಿದೆ. ಈ ವರ್ಷವೂ ಮಳೆ ಬಿಟ್ಟ ತಕ್ಷಣ ಧೂಳು ಏಳದ ರೀತಿಯಲ್ಲಿ ರಸ್ತೆ ದುರಸ್ತಿ ಮಾಡಲಾಗುವುದು. ಕೇಂದ್ರ ಸರಕಾರ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕೂಡಾ ರಾಜ್ಯಕ್ಕೆ ಅನುದಾನ ನೀಡಿಲ್ಲ. ಈ ಬಗ್ಗೆ ಸಂಸತ್ನಲ್ಲಿ ಗಲಾಟೆ ಮಾಡಲಾಗಿದೆ ಎಂದರು.