ಹುಬ್ಬಳ್ಳಿ, ಸೋಮವಾರ, 27 ಸೆಪ್ಟೆಂಬರ್ 2010( 17:34 IST )
ವಿಕಲಚೇತನರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲು ತಾವು ಶೀಘ್ರದಲ್ಲಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸುವುದಾಗಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ಆಶಾಕಿರಣ ಅಂಗವಿಕಲರ ಸೇವಾ ಸಂಘ ಹಾಗೂ ಕರ್ನಾಟಕ ಅಂಗವಿಕಲರ ಒಕ್ಕೂಟ ಆಶ್ರಯದಲ್ಲಿ ವಿದ್ಯಾನಗರದ ಮರಾಠ ಭವನದಲ್ಲಿ ನಡೆದ ಉತ್ತರ ಕರ್ನಾಟಕ ಅಂಗವಿಕಲರ ಜಾಗೃತಿ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುವ ಮುನ್ನ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ವಿಕಲಚೇತನರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸುವುದಾಗಿ ಘೋಷಿಸಲಾಗಿತ್ತು. ಆದರೆ ಅದು ಇಂದಿಗೂ ಈಡೇರಿಲ್ಲ ಎಂದು ಒಪ್ಪಿಕೊಂಡರು.
ರಾಜ್ಯದಲ್ಲಿ ಸುಮಾರು 26 ಲಕ್ಷ ವಿಕಲಚೇತನರಿದ್ದಾರೆ. ಅವರಿಗೆ ಅನುಕಂಪದ ಬದಲಾಗಿ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕಿದೆ. ಯಾವುದೇ ಕಾರಣಕ್ಕೂ ವಿಕಲಚೇತನರು ತಮ್ಮ ವಿಕಲಾಂಗತೆ ಬಗ್ಗೆ ಕೀಳರಿಮೆ ಭಾವನೆ ಹೊಂದಬಾರದು. ಜೀವನದಲ್ಲಿ ಏನನ್ನಾದರೂ ಸಾಧಿಸಿ ತೋರಿಸುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ವಿಕಲಚೇತನರ ಎಲ್ಲ ಬೇಡಿಕೆಗಳನ್ನು ಸಂಬಂಧಪಟ್ಟ ಇಲಾಖೆ ಮುಖಾಂತರ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ಶೆಟ್ಟರ್ ಭರವಸೆ ನೀಡಿದರು.