ತನಗೆ ಸಚಿವ ಸ್ಥಾನ ಸಿಗಬಾರದೆಂಬ ಉದ್ದೇಶದಿಂದ ಪಕ್ಷದ ಕೆಲವು ಮುಖಂಡರು ನಡೆಸಿದ ಲಾಬಿಯಿಂದ ಸಚಿವ ಸ್ಥಾನ ಕೈತಪ್ಪಿಹೋಗಿದೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತನಗೆ ಸಚಿವ ಸ್ಥಾನ ನೀಡದಂತೆ ಯಾರು ಲಾಬಿ ನಡೆಸಿದ್ದಾರೆಂಬ ವಿಚಾರ ಹೇಳಲು ಬಯಸುವುದಿಲ್ಲ. ಸಚಿವ ಸ್ಥಾನ ನೀಡದಂತೆ ಲಾಬಿ ನಡೆಸಿದ ಮುಖಂಡರು ತಮ್ಮ ಆತ್ಮವಿಮರ್ಶೆ ಮಾಡಿಕೊಳ್ಳಬೇಕೆಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಸಮಾಧಾನ ತೋಡಿಕೊಂಡರು.
ಸಂಘ ಪರಿವಾರದಿಂದ ತಾನು ರಾಜಕೀಯಕ್ಕೆ ಬಂದವನು. ಮೂರು ಬಾರಿ ಶಾಸಕನಾಗಿ ಆಯ್ಕೆಗೊಂಡಿದ್ದೇನೆ. ಪಕ್ಷದಲ್ಲಿ ಹಿರಿಯ ಶಾಸಕರನ್ನು ಕಡೆಗಣಿಸಿ ಪಕ್ಷೇತರರಿಗೆ ಮಣೆ ಹಾಕಲಾಗಿದೆ. ಸಚಿವ ಸಂಪುಟ ವಿಸ್ತರಣೆ ಸಂದರ್ಭ ಕೊಡಗಿಗೆ ಅವಕಾಶ ನೀಡದೆ ಇರುವುದು ಮುಂದಿನ ಚುನಾವಣೆಗಳಲ್ಲಿ ಪಕ್ಷದ ಮೇಲೆ ಪರಿಣಾಮ ಬೀರಲಿದೆ. ಅಲ್ಲದೆ ಕೊಡಗು ಜಿಲ್ಲೆಯನ್ನು ನಿರಂತರವಾಗಿ ಕಡೆಗಣಿಸುತ್ತಾ ಬರುತ್ತಿರುವುದು ಮುಂದೊಂದು ದಿನ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಹಾದಿ ಮಾಡಿಕೊಟ್ಟಂತಾಗುತ್ತದೆ ಎಂದರು.
ಕೊಡಗು ವಿಶಿಷ್ಟವಾದ ಜಿಲ್ಲೆ. ಇಲ್ಲಿನ ಸಮಸ್ಯೆಗಳನ್ನು ಹೊರಗಿನವರಿಗೆ ಅರ್ಥ ಮಾಡಿಕೊಳ್ಳಲು ಕನಿಷ್ಠ ಒಂದು ವರ್ಷ ಬೇಕು. ಹೀಗಾಗಿ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂಬುದು ಜಿಲ್ಲೆಯ ಜನರ ಅಭಿಲಾಷೆಯಾಗಿತ್ತು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಅವರು ತನಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ ಸಚಿವ ಸ್ಥಾನ ಎರಡು ಬಾರಿಯೂ ನೀಡಲಿಲ್ಲ ಎಂದು ದೂರಿದರು.
ತಾನು ರೆಡ್ಡಿಗಳ ಗುಂಪಿನಲ್ಲಿ ಗುರುತಿಸಿಕೊಂಡಿಲ್ಲ. ರಾಜಕೀಯವಾಗಿ ರೆಡ್ಡಿಗಳು ನನಗಿಂತ ಕಿರಿಯರು. ಅವರು ತನ್ನ ನಾಯಕರಾಗಲು ಸಾಧ್ಯವಿಲ್ಲ. ರಾಜ್ಯದಲ್ಲಿ ಪಕ್ಷವನ್ನು ಉಳಿಸಬೇಕೆಂಬ ಉದ್ದೇಶದಿಂದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ದೆಹಲಿಗೆ ತೆರಳಿ ಪಕ್ಷದ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿದ್ದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವವನ್ನು ತಾನು ಎಂದೂ ಪ್ರಶ್ನಿಸಿಲ್ಲ.
ಕೊಡಗು ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರೇಣುಕಾಚಾರ್ಯ ಪ್ರಾರಂಭದಲ್ಲಿಯೇ ಹೇಳಿದ್ದರು. ಈ ವಿಚಾರವನ್ನು ತಾನು ಮುಖ್ಯಮಂತ್ರಿಯ ಗಮನಕ್ಕೆ ತಂದಿದ್ದೇನೆ. ಈ ಕುರಿತು ಮುಂದೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆಂದು ಹೇಳಿದರು.